ADVERTISEMENT

‘ಸಿ’–‘ಡಿ’: ಪತಿ ಪತ್ನಿ ವರ್ಗಾವಣೆ ನೀತಿ ಬದಲು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 16:06 IST
Last Updated 17 ನವೆಂಬರ್ 2022, 16:06 IST

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ‘ಸಿ’ ಮತ್ತು ‘ಡಿ’ ಶ್ರೇಣಿ ನೌಕರರ ಪತಿ ಮತ್ತು ಪತ್ನಿ ಪ್ರಕರಣಗಳ ವರ್ಗಾವಣೆ ನಿಯಮಾವಳಿಯ ತಿದ್ದುಪಡಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಹೊಸ ನಿಯಮದ ಪ್ರಕಾರ ಆಯಾ ಇಲಾಖೆಯ ಸೇವಾ ನಿಯಮದ ಅನ್ವಯ ನಿಗದಿ ಮಾಡಿರುವ ಕನಿಷ್ಠ ಸೇವಾ ಅವಧಿ (ನೇಮಕಗೊಂಡ ಸ್ಥಳದಲ್ಲಿ) ಪೂರ್ಣಗೊಳಿಸಿದ ನಂತರ ಪತಿ– ಪತ್ನಿ ಪ್ರಕರಣದಲ್ಲಿ ಮಾತ್ರ ಅಂತರ್‌ ಜಿಲ್ಲೆ ವರ್ಗಾವಣೆಗೆ ಅವಕಾಶ ನೀಡಲಾಗುವುದು. ಈ ಬದಲಾವಣೆಯನ್ನು ನೌಕರರ ವರ್ಗಾವಣೆ ನಿಯಮಕ್ಕೆ ಸೇರಿಸಲಾಗುವುದು ಎಂದು ಸಚಿವ ಸಂಪುಟ ಸಭೆಯ ಬಳಿಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿಕ್ಷಣ ಇಲಾಖೆಯಲ್ಲಿ ನೇಮಕಗೊಂಡ ಸ್ಥಳದಲ್ಲಿ ಕನಿಷ್ಠ ಸೇವಾ ಅವಧಿ 5 ವರ್ಷ ಇದ್ದರೆ, ಗೃಹ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ಗಳಿಗೆ 7 ವರ್ಷ ನಿಗದಿ ಮಾಡಲಾಗಿದೆ. ಅದೇ ರೀತಿ ಇತರ ಇಲಾಖೆಗಳಲ್ಲೂ ಕನಿಷ್ಠ ಸೇವಾ ಅವಧಿ ನಿಗದಿ ಮಾಡಲಾಗಿದೆ. ಈ ಅವಧಿ ಮುಗಿಸಿದ ನಂತರ ವರ್ಗಾವಣೆಗೆ ಅವಕಾಶ ನೀಡಲಾಗುವುದು. ಕೆಲವು ಇಲಾಖೆಗಳಲ್ಲಿ ನೌಕರರು 10–15 ವರ್ಷಗಳು ಕಳೆದರೂ ಪತಿ– ಪತ್ನಿ ಪ್ರಕರಣಗಳಲ್ಲಿ ವರ್ಗಾವಣೆ ಪಡೆಯಲು ಸಾಧ್ಯ ಆಗುತ್ತಿಲ್ಲ. ವಿಶೇಷವಾಗಿ ಕಾನ್ಸ್‌ಟೇಬಲ್‌ಗಳು ತೊಂದರೆಗೀಡಾಗಿದ್ದು, ನಿಯಮ ಬದಲಾವಣೆಯಿಂದ ಅವರಿಗೆ ಪ್ರಯೋಜನವಾಗಲಿದೆ ಎಂದು ಸುಧಾಕರ್‌ ತಿಳಿಸಿದರು.

ADVERTISEMENT

ವನ್ಯಜೀವಿಧಾಮಗಳಿಗೆ ಒಪ್ಪಿಗೆ:

ರಾಜ್ಯದಲ್ಲಿ ಹೊಸದಾಗಿ ಉತ್ತಾರೆಗುಡ್ಡ ವನ್ಯಜೀವಿಧಾಮ, ಬಂಕಾಪುರ ವನ್ಯಜೀವಿಧಾಮ ಮತ್ತು ಅರಸೀಕೆರೆ ಕರಡಿಧಾಮಗಳ ಘೋಷಣೆಗೆ ಅನುಮೋದನೆ ನೀಡಲಾಗಿದೆ ಎಂದರು.

ಅಲ್ಲದೆ, ಹಿರೆಸೂಲೆಕೆರೆ ಕರಡಿ ಸಂರಕ್ಷಣಾ ಮೀಸಲು ಪ್ರದೇಶ, ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಮುಂಡಿಗೆಕೆರೆ ಮತ್ತು ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ಬೋನಾಳ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶಗಳನ್ನು ಘೋಷಿಸಬೇಕೆಂಬ ಅರಣ್ಯ ಇಲಾಖೆಯ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು ಎಂದು ಸುಧಾಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.