ADVERTISEMENT

ಕಾಂಗ್ರೆಸ್‌ಗೆ ಜೆಡಿಎಸ್‌ ದುಂಬಾಲು

ತಿಂಗಳ ಕೊನೆಯಲ್ಲಿ ಸಂಪುಟ ವಿಸ್ತರಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 17:18 IST
Last Updated 11 ನವೆಂಬರ್ 2018, 17:18 IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಬೇಗ ಪೂರ್ಣಗೊಳಿಸುವಂತೆ ಜೆಡಿಎಸ್‌ ವರಿಷ್ಠರು ಕಾಂಗ್ರೆಸ್‌ ನಾಯಕರ ದುಂಬಾಲು ಬಿದ್ದಿದ್ದಾರೆ.

ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ‘ದೋಸ್ತಿ’ ಪಕ್ಷಗಳ ಪಾಳೆಯದಲ್ಲಿ ಹುಮ್ಮಸ್ಸು ನೂರ್ಮಡಿಯಾಗಿದೆ. ಇದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮಾಡಿದರೆ, ಉಭಯ ಪಕ್ಷಗಳಲ್ಲಿನ ಅತೃಪ್ತಿಯ ಬೇಗುದಿ ಶಮನ ಮಾಡುವುದು ಸುಲಭ ಎಂಬುದು ಜೆಡಿಎಸ್‌ ವರಿಷ್ಠರ ಲೆಕ್ಕಾಚಾರ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜಿ.ಪರಮೇಶ್ವರ ಅವರು ಭೇಟಿ ಆದಾಗ, ‘ಆದಷ್ಟು ಬೇಗ ಸಂಪುಟ ವಿಸ್ತರಣೆ ಮುಗಿಸಿ ಬಿಡೋಣ. ನಿಮ್ಮ ಕಡೆಯ ಪಟ್ಟಿ ಸಿದ್ಧಪಡಿಸಿ ಎಂದು ಸಲಹೆ ನೀಡಿದರು. ಅದಕ್ಕೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಇದೇ 20 ರ ಬಳಿಕ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಂಭಾವ್ಯ ಸಚಿವರ ಪಟ್ಟಿಯನ್ನು ದೆಹಲಿಗೆ ಒಯ್ಯುವ ಸಾಧ್ಯತೆ ಇದೆ. ಕಾಂಗ್ರೆಸ್ ಪಟ್ಟಿ ನೀಡಿದರೆ ತಕ್ಷಣವೇ ಸಂಪುಟ ವಿಸ್ತರಣೆಗೆ ಜೆಡಿಎಸ್‌ ಸಿದ್ಧವಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಪಾಳೆಯದಲ್ಲಿ ಪಟ್ಟಿ ಸಿದ್ಧಪಡಿಸುವ ಅಥವಾ ಬಿಡುವ ನಿಯಂತ್ರಣ ಇರುವುದು ಸಿದ್ದರಾಮಯ್ಯ ಅವರ ಕೈಯಲ್ಲಿ. ಅವರು ಹಸಿರು ನಿಶಾನೆ ತೋರಿದರೆ ಮಾತ್ರ ಹೈಕಮಾಂಡ್‌ ಸಂಪುಟ ವಿಸ್ತರಣೆಗೆ ಅಂತಿಮ ಮುದ್ರೆ ಒತ್ತಲಿದೆ ಎಂಬ ಅರಿವು ಜೆಡಿಎಸ್‌ ವರಿಷ್ಠರಿಗೆ. ಹೀಗಾಗಿ ಜೆಡಿಎಸ್‌ ನಾಯಕರು ಸಿದ್ದರಾಮಯ್ಯ ಅವರ ದುಂಬಾಲು ಬಿದ್ದಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ತಿಂಗಳ ಕೊನೆಯಲ್ಲಿ ವಿಸ್ತರಣೆ: ಇದೇ ತಿಂಗಳ ಕೊನೆ ಅಥವಾ ಡಿಸೆಂಬರ್ ಅಧಿವೇಶನಕ್ಕೆ ಮುನ್ನ ಸಚಿವ ಸಂಪುಟ ವಿಸ್ತರಣೆ ಖಚಿತ. ಈಗ
ಐದು ರಾಜ್ಯಗಳ ಚುನಾವಣೆ ಇರುವುದರಿಂದ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯದ ವಿದ್ಯಮಾನದ ಬಗ್ಗೆ ತಲೆ ಕೆಡಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಮೂಲಗಳು ಹೇಳಿವೆ.

ಸಭಾಪತಿ ಸ್ಥಾನಕ್ಕೆ ಚುನಾವಣೆ:ಡಿಸೆಂಬರ್ ಅಧಿವೇಶನದಲ್ಲಿ ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಹಿರಿಯ ನಾಯಕ ಎಸ್‌.ಆರ್‌.ಪಾಟೀಲ ಅವರನ್ನೇ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ.

ಅಲ್ಲದೆ, ಪಕ್ಷದ ವಿದ್ಯಮಾನಗಳಿಂದ ಬೇಸತ್ತಿರುವ ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಲೋಕಸಭೆಗೆ ಆಯ್ಕೆಯಾಗಿರುವ ವಿ.ಎಸ್‌.ಉಗ್ರಪ್ಪ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಈಗಾಗಲೇ ಲಾಬಿ ಆರಂಭವಾಗಿದೆ. ಆಕಾಂಕ್ಷಿಗಳು ಸಿದ್ದರಾಮಯ್ಯ ಅವರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.