ADVERTISEMENT

ಸಂಪುಟ ವಿಸ್ತರಣೆ: ತೃಪ್ತಿ ಮಧ್ಯೆಯೇ ಅತೃಪ್ತಿ

ಎಂಎಸ್ಐಎಲ್‌ ಅಧ್ಯಕ್ಷ ಸ್ಥಾನಕ್ಕೆ ಕುಮಠಳ್ಳಿ ನಕಾರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 20:01 IST
Last Updated 10 ಫೆಬ್ರುವರಿ 2020, 20:01 IST
ನೂತನ ಸಚಿವರು
ನೂತನ ಸಚಿವರು   
""

ಬೆಂಗಳೂರು: ಅನೇಕ ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

ಜಲಸಂಪನ್ಮೂಲ ಖಾತೆಯೇ ಬೇಕು ಎಂದು ಹಟಕ್ಕೆ ಬಿದ್ದಿದ್ದ ಜಾರಕಿಹೊಳಿ, ನಗರಾಭಿವೃದ್ಧಿಯ ಮೇಲೆ ಕಣ್ಣಿಟ್ಟಿದ್ದ ಬೈರತಿ ಬಸವರಾಜ್ ಅದರಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯ ಸಹಕಾರ ವಸತಿ ಮಹಾಮಂಡಲದ ಅಧ್ಯಕ್ಷರೂ ಆಗಿರುವ ಎಸ್‌.ಟಿ.ಸೋಮಶೇಖರ್‌ಗೆ ಬಯಸಿದ ಖಾತೆಯೇ ಸಿಕ್ಕಿದೆ.

‘ಇಂಧನ ಖಾತೆ ಬಯಸಿದ್ದರು’ ಎನ್ನಲಾದ ಡಾ. ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಿದ್ದು, ‘ಉತ್ತಮ ಖಾತೆಯ ನಿರೀಕ್ಷೆಯಲ್ಲಿದ್ದೆ’ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ವಲಸೆ ಬಂದವರ ಪೈಕಿ ಜಾರಕಿಹೊಳಿ, ಆನಂದ್‌ ಸಿಂಗ್‌ ಬಿಟ್ಟರೆ ಉಳಿದವರು ಮೊದಲ ಬಾರಿ ಸಚಿವರಾಗಿದ್ದಾರೆ.

ADVERTISEMENT

ಬಿ.ಸಿ. ಪಾಟೀಲರಿಗೆ ಅರಣ್ಯ ಖಾತೆ ಕೊಟ್ಟಿದ್ದರೂ ಪರಿಸರ ಖಾತೆಯನ್ನು ಸಿ.ಸಿ. ಪಾಟೀಲ ಅವರಲ್ಲೇ ಉಳಿಸಲಾಗಿದೆ. ಮಹೇಶ ಕುಮಠಳ್ಳಿ ಅವರನ್ನು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನ ಅಧ್ಯಕ್ಷರಾಗಿ ನೇಮಿಸಲಾಗಿದೆ. ಆದರೆ, ಅದನ್ನು ಅವರು ಒಪ್ಪಿಲ್ಲ.

ಸವದಿ, ಈಶ್ವರಪ್ಪಗೆ ನಷ್ಟ

ಮೂಲ ಬಿಜೆಪಿಯ ಸಚಿವರ ಪೈಕಿ ಕೆಲವರು ಹೆಚ್ಚುವರಿ ಖಾತೆಗಳನ್ನು ಕಳೆದುಕೊಂಡಿದ್ದರೆ, ಇನ್ನು ಕೆಲವು ಸಚಿವರು ಉತ್ತಮ ಖಾತೆಗಳನ್ನು ಗಿಟ್ಟಿಸಿದ್ದಾರೆ. ಲಕ್ಷ್ಮಣ ಸವದಿ ಬಳಿ ಇದ್ದ ಕೃಷಿ ಖಾತೆ, ಬಸವರಾಜ ಬೊಮ್ಮಾಯಿಗೆ ಸಿಕ್ಕಿದೆ. ಆದರೆ, ಬೊಮ್ಮಾಯಿ ಸಹಕಾರ ಖಾತೆ ಕಳೆದುಕೊಂಡಿದ್ದಾರೆ.

ಕೆ.ಎಸ್‌.ಈಶ್ವರಪ್ಪ ಬಳಿ ಇದ್ದ ಕ್ರೀಡೆ, ಯುವಜನ ಸಬಲೀಕರಣ ಸಿ.ಟಿ.ರವಿ ಮಡಿಲಿಗೆ ಹೋಗಿದೆ. ವಿ.ಸೋಮಣ್ಣ ಅವರ ಬಳಿ ಇದ್ದ ತೋಟಗಾರಿಕೆ ಮತ್ತು ರೇಷ್ಮೆ ಖಾತೆಯನ್ನು ನಾರಾಯಣಗೌಡ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಅಶೋಕ ಅವರಿಂದ ಪೌರಾಡಳಿತ ಮತ್ತು ಶಶಿಕಲಾ ಜೊಲ್ಲೆ ಅವರಿಂದ ಆಹಾರ ಮತ್ತು ನಾಗರಿಕ ಪೂರೈಕೆ ಹಿಂದಕ್ಕೆ ಪಡೆಯಲಾಗಿದೆ.

ಗೋವಿಂದ ಕಾರಜೋಳ ಸಮಾಜ ಕಲ್ಯಾಣ, ಜೆ.ಸಿ.ಮಾಧುಸ್ವಾಮಿ ಸಣ್ಣ ನೀರಾವರಿ, ಶ್ರೀರಾಮುಲು ಅವರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆಗಳು ಹೆಚ್ಚುವರಿಯಾಗಿ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.