ADVERTISEMENT

ಸಂಪುಟ ವಿಸ್ತರಣೆ ಅನುಮಾನ

ಕಾಂಗ್ರೆಸ್ ನಡೆ ವಿರುದ್ಧ ಸಿಡಿದೆದ್ದ ಶಾಸಕರು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 17:37 IST
Last Updated 6 ಡಿಸೆಂಬರ್ 2018, 17:37 IST

ಬೆಂಗಳೂರು:‌ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮನ್ವಯ ಸಮಿತಿ ದಿನ (ಡಿ. 22) ನಿಗದಿಪಡಿಸಿದ್ದರೂ, ನಡೆಯುವ ಬಗ್ಗೆ ಕಾಂಗ್ರೆಸ್‌ ಹಿರಿಯ– ಕಿರಿಯ ಶಾಸಕರು ಮತ್ತು ಕೆಲವು ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪಕ್ಷದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ, ‘ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿಕೊಂಡು ಬಂದು ಮುಂದೂಡಿಕೆಯಾಗುತ್ತಲೇ ಇದೆ. ಇದೇ 22ಕ್ಕೆ ನಡೆಯುವುದೂ ಅನುಮಾನ. ಅಷ್ಟೇ ಅಲ್ಲ, ಲೋಕಸಭೆ ಚುನಾವಣೆವರೆಗೂ ಸಂಪುಟ ವಿಸ್ತರಣೆ ಆಗುವುದಿಲ್ಲ’ ಎಂದಿದ್ದಾರೆ.

ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ‘ಕಿರಿಯರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಬಾರಿ ಹಿರಿಯರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಈಗ ಸಂಪುಟದಲ್ಲಿ ಹಿರಿ ತಲೆಗಳೇ ಹೆಚ್ಚಿವೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಹೇಳಿಬಿಟ್ಟರೆ ಒಳ್ಳೆಯದು. ಲಾಬಿ ಮಾಡುವವರಿಗೆ ವಿಶ್ರಾಂತಿ ಸಿಗುತ್ತದೆ. ನಾನು ಯಾರ ಬಳಿಯೂ ಹೋಗಿ ಸಚಿವ ಸ್ಥಾನ ನೀಡಿ ಎಂದು ಗೋಗರೆಯುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ಸಮನ್ವಯ ಸಮಿತಿಯಲ್ಲಿ ನಿರ್ಧರಿಸಿದಂತೆ 22ರಂದು ಸಂಪುಟ ವಿಸ್ತರಣೆ ಆಗಲೇಬೇಕು’ ಎಂದು ಎಂ.ಬಿ. ಪಾಟೀಲ ಪಟ್ಟು ಹಿಡಿದಿದ್ದಾರೆ ಎಂದು ಗೊತ್ತಾಗಿದೆ.

‘ಅಧಿವೇಶನದ ಸಂದರ್ಭದಲ್ಲಿ ಶಾಸಕರ ಅತೃಪ್ತಿ ಸ್ಫೋಟವಾಗದಂತೆ ತಡೆಯಲು ಸಮನ್ವಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಅಷ್ಟೆ. ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವುದು ನಿಶ್ಚಿತ’ ಎಂದು ಹಿರಿಯ ಶಾಸಕರೊಬ್ಬರು ಹೇಳಿದರು.

‘ಲೋಕಸಭಾ ಚುನಾವಣೆವರೆಗೆ ಸಚಿವ ಸಂಪುಟ ವಿಸ್ತರಣೆ ಆಗದು’ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಹೇಳಿದರು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬುದು 40ಕ್ಕೂ ಹೆಚ್ಚು ಶಾಸಕರ ಅಭಿಲಾಷೆ ಎಂದು ಅವರು ಹೇಳಿದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಶಾಸಕರ ಅಭಿಪ್ರಾಯ ಅದು. ಈಗ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಂದೆ ನೋಡೋಣ’ ಎಂದರು.

ಸಿಎಲ್‌ಪಿ ಮುಂದೂಡಿಕೆಗೆ ಅಸಮಾಧಾನ

ಇದೇ 8ರಂದು ನಡೆಸಲು ಉದ್ದೇಶಿಸಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು 10ಕ್ಕೆ ಮುಂದೂಡಿರುವುದೂ ಕೂಡಾ ಕಾಂಗ್ರೆಸ್ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ಮುಖ್ಯಮಂತ್ರಿ ಈ ಸಭೆಯಲ್ಲಿ ಭಾಗವಹಿಸುತ್ತಾರೆ. ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಬಹುದು’ ಎಂದು ನಿರೀಕ್ಷಿಸಿದ್ದ ಕಾಂಗ್ರೆಸ್ ಶಾಸಕರಿಗೆ ನಿರಾಸೆಯಾಗಿದೆ.

‘ಸಂಪುಟ ವಿಸ್ತರಣೆ ಖಚಿತ’

‘ನಿಗದಿಪಡಿಸಿದ ದಿನದಂದೇ ಸಂಪುಟ ವಿಸ್ತರಣೆ ಖಚಿತ’ ಎಂದು ಸಿದ್ದರಾಮಯ್ಯ ಹೇಳಿದರು. ‘ರಾಹುಲ್‌ ಗಾಂಧಿ ಭೇಟಿಗೆ ಸಮಯ ಕೊಟ್ಟಿದ್ದಾರೆ. ಅಧಿವೇಶನ ಮುಗಿದ ದಿನ ಸಂಜೆ ನಾವು ದೆಹಲಿಗೆ ಹೋಗುತ್ತೇವೆ. 21ರಂದೇ ಹೊಸ ಸಚಿವರ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದರು.

ಕಾಂಗ್ರೆಸ್ ಹಿರಿಯ ನಾಯಕರನ್ನು ಪಕ್ಷ ಕಡೆಗಣಿಸುತ್ತಿದೆ ಎಂಬ ಆರೋಪಕ್ಕೆ ಅವರು, ‘ಹಾಗೆಂದು ನಿಮಗೆ ಯಾರು ಹೇಳಿದರು. ಆ ರೀತಿ ಏನೂ ಇಲ್ಲ. ನಾವು ಯಾರನ್ನೂ ಕಡೆಗಣಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.