ADVERTISEMENT

ಸಚಿವ ಸ್ಥಾನಕ್ಕಾಗಿ ಕಣ್ಣೀರು... ಮುಂದುವರಿದ ಮನವೊಲಿಕೆ ಯತ್ನ

ಬಿಎಸ್‌ವೈ ಮುಂದೆ ಶಾಸಕರ ಅಹವಾಲು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 20:26 IST
Last Updated 21 ಆಗಸ್ಟ್ 2019, 20:26 IST
   

ಬೆಂಗಳೂರು: ಸಚಿವ ಸ್ಥಾನ ಸಿಗದ ಕಾರಣ ಒಬ್ಬ ಶಾಸಕ ಮುಖ್ಯಮಂತ್ರಿ ಮುಂದೆ ಕಣ್ಣೀರು ಹಾಕಿದರೆ, ಕೆಲವರು ಗೊಣಗಾಟ ನಡೆಸಿದರು. ಹಿರಿಯ ಶಾಸಕ ಸಿ.ಎಂ. ಉದಾಸಿ ಸಚಿವರಾಗಿ ಕೆಲಸ ಮಾಡಲು ತಮ್ಮಲ್ಲಿಇನ್ನೂ ಕಸುವು ಇರುವುದಾಗಿ ಮನವೊಲಿಸಲು ಪ್ರಯತ್ನ ನಡೆಸಿದರು.

‘ಕಳೆದ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರಿಗೆ ಕೊಟ್ಟಿದ್ದು ಸರಿಯಲ್ಲ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಕೆಲವು ಸಚಿವರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದರು. ಹೀಗೆ ಬೆಳಗ್ಗಿನಿಂದ ರಾತ್ರಿಯವರೆಗೆ ಯಡಿಯೂರಪ್ಪ ಅವರ ಮುಂದೆ ಸಚಿವಾಕಾಂಕ್ಷಿ ಶಾಸಕರಿಂದ ಅಕ್ಷರಶಃ ಪೆರೇಡ್‌ ನಡೆಯಿತು.

ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ಉಮೇಶ್‌ ಕತ್ತಿಯವರಿಗೆ ಗಾಳ ಹಾಕಲು ಜೆಡಿಎಸ್‌ ಮುಂದಾಗಿದ್ದು, ವಿಧಾನಪರಿಷತ್‌ ಸದಸ್ಯ ಬಸವರಾಜಹೊರಟ್ಟಿ ಅವರು ಮತ್ತೆ ಮನೆಗೆ (ಜೆಡಿಎಸ್‌) ಬರುವಂತೆ ಆಹ್ವಾನ ನೀಡಿದ್ದಾರೆ. ತಮಗೂ ಅವಕಾಶ ನೀಡಬೇಕು ಎಂಬುದಾಗಿ ಬಸನಗೌಡ ಪಾಟೀಲ ಯತ್ನಾಳ್ ಒತ್ತಾಯ ಮುಂದಿಟ್ಟರು.

ADVERTISEMENT

ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರುತಮಗೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಬಿಎಸ್‌ವೈ ಮುಂದೆ ಕಣ್ಣೀರು ಹಾಕಿದರು. ಚುನಾವಣೆಯಲ್ಲಿ ಸೋತಿರುವ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರನ್ನು ಸಮಾಧಾನಪಡಿಸಿ, ಕಷ್ಟ ಕಾಲದಲ್ಲಿ ಜತೆಗೆ ನಿಲ್ಲಬೇಕು ಎಂಬುದಾಗಿ ಹಿತವಚನ ಹೇಳಿದರೆಂದು ಮೂಲಗಳು ಹೇಳಿವೆ.

ಶಾಸಕ ರಾಜುಗೌಡ ಅವರೂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು. ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಸಚಿವ ಸಂಪುಟದಲ್ಲಿ ನನಗೂ ಸಚಿವ ಸ್ಥಾನ ಸಿಗಬೇಕಿತ್ತು. ಪಕ್ಷ ಮತ್ತು ಸಂಘದಿಂದಲೂ ನನಗೆ ಸಚಿವ ಸ್ಥಾನದ ಭರವಸೆ ಸಿಕ್ಕಿತ್ತು. ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ’ ಎಂದರು.

‘ಈ ಸಂಬಂಧ ಮುಖ್ಯಮಂತ್ರಿಯವರ ಜತೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ, ಚಿಂತೆ ಮಾಡಬೇಡ ಅಂತ ಭರವಸೆ ನೀಡಿದರು. ಹೊಸದಾಗಿ ಸಚಿವರಾದವರಿಗೆ ಒಳ್ಳೆಯದಾಗಲಿ, ನನಗೆ ಸಚಿವ ಸ್ಥಾನ ತಪ್ಪಿಸಿದವರಿಗೂ ಒಳ್ಳೆಯದಾಗಲಿ’ ಎಂದರು.

‘ಬೇಸರದ ಸಂಗತಿ ಎಂದರೆ, ನೋಬಾಲ್‌ಗೆ ನಾನು ರನೌಟ್‌ ಆಗಿದ್ದೇನೆ. ನಾನೊಬ್ಬ ಕ್ರೀಡಾಪಟು. ಆಟದಲ್ಲಿ ಸೋಲು ಮತ್ತು ಗೆಲುವು ಕಂಡಿದ್ದೇನೆ. ನಾನಿನ್ನೂ ಚಿಕ್ಕವನು ಮುಂದೆ ಆಟದಲ್ಲಿ ಗೆಲ್ಲುತ್ತೇನೆ’ ಎಂದು ರಾಜುಗೌಡ ಹೇಳಿದರು.

ಶಾಸಕರ ಭವನದಲ್ಲಿ ಉಮೇಶ್‌ ಕತ್ತಿಯವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಹೊರಟ್ಟಿ, ‘ಮರಳಿ ಮನೆಗೆ ಬನ್ನಿ ಎಂದು ಹೇಳುತ್ತಲೇ ಇದ್ದೇವೆ. ಇವತ್ತೂ ಅದೇ ವಿಷಯ ಹೇಳಿದ್ದೇನೆ. ಕೆಲವು ಮುಳ್ಳುಗಳಿವೆ, ಸರಿಪಡಿಸಿಕೊಂಡು ಬರುವುದಾಗಿ ಹೇಳಿದರು’ ಎಂದರು.

‘ಎಚ್‌ಡಿಕೆ ಜತೆ ಹೋಗುವ ಬದಲು ರಾಜಕೀಯ ಬಿಡ್ತೇನೆ’

‘ಯಾವುದೇ ಕಾರಣಕ್ಕೂ ಎಚ್‌.ಡಿ.ಕುಮಾರಸ್ವಾಮಿ ಜತೆ ಹೋಗುವುದಿಲ್ಲ. ಅದರ ಬದಲು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ತಂದೆ ಸಮಾನರಾದ ಯಡಿಯೂರಪ್ಪ ಮತ್ತು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ’ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

‘ನಾನು ಬಂಡಾಯ ಎದ್ದಿಲ್ಲ. ಅತೃಪ್ತರಿಗೆ ನಾಯಕನೂ ಅಲ್ಲ. ಯಡಿಯೂರಪ್ಪ ರಾಮನಾದರೆ ನಾನು ಆಂಜನೇಯ. ನನ್ನ ನಿಷ್ಠೆ ಅಚಲ. ಮಂತ್ರಿ ಸ್ಥಾನ ನನ್ನ ಗುರಿಯಲ್ಲ, ಆಕಾಂಕ್ಷಿಯೂ ಅಲ್ಲ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಬುದ್ಧ ರಾಜಕಾರಣಿಯಾಗಿ ಬೆಳೆಯಬೇಕು ಎಂಬ ಹಂಬಲ ಹೊಂದಿದ್ದೇನೆ. ಯಡವಟ್ಟುಗಳನ್ನು ಮಾಡಿಕೊಳ್ಳುವುದಿಲ್ಲ. ಮಾಧ್ಯಮಗಳಲ್ಲಿ ನನ್ನ ಕುರಿತು ಬರುತ್ತಿರುವ ವ್ಯಾಖ್ಯಾನಗಳಿಂದ ಬೇಸತ್ತಿದ್ದೇನೆ’ ಎಂದರು.

ಸುಳ್ಯ: ಪಕ್ಷದ ಪ್ರಮುಖರ ರಾಜೀನಾಮೆ

ಸುಳ್ಯ: ಆರು ಬಾರಿ ಗೆದ್ದಿರುವ ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಸಿಗುವ ತನಕ ಪಕ್ಷದ ಚಟುವಟಿಕೆಗಳಲ್ಲಿ ಅಸಹಕಾರ ತೋರಲು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಮುಖರು ನಿರ್ಧರಿಸಿದ್ದರೆ, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತಿಗಳ ಹಾಗೂ ಎಪಿಎಂಸಿ, ಸಹಕಾರಿ ಸಂಘಗಳ ಸದಸ್ಯರು ಪಕ್ಷದ ಮಂಡಲ ಸಮಿತಿ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

‘ಸುಮಾರು ನೂರಕ್ಕೂ ಹೆಚ್ಚು ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ’ ಎಂದು ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಬುಧವಾರ ದೃಢಪಡಿಸಿದ್ದು, ‘ಸಚಿವ ಸ್ಥಾನ ಸಿಗುವ ತನಕ ಪಕ್ಷದ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗುವುದು. ಜನಪ್ರತಿನಿಧಿಗಳು ತಮ್ಮ ಕಚೇರಿಗೆ ತೆರಳುವುದಿಲ್ಲ. ಕಾರ್ಯಕರ್ತರು ಪಕ್ಷದ ಯಾವುದೇ ಕೆಲಸಗಳನ್ನು ಮಾಡದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.