ADVERTISEMENT

ಕಾಫಿ ಬಟ್ಟಲಿನಲ್ಲಿ ಕಾಮನಬಿಲ್ಲು!

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:45 IST
Last Updated 30 ಜುಲೈ 2019, 19:45 IST
   

ಒಂದು ಲೋಟ ಕಾಫಿ ಬಟ್ಟಲಿನಲ್ಲಿ ಸಾಧ್ಯತೆಗಳ ಕಾಮನಬಿಲ್ಲು ಮೂಡಿಸಿತ್ತು ‘ಕೆಫೆ ಕಾಫಿ ಡೇ’.

a lot can happen over a cup of coffee... ಎನ್ನುವ ಟ್ಯಾಗ್ ಲೈನ್‌ ಮೂಲಕ ಕಾಫಿ ಹೀರುತ್ತ ಒಂದೆಡೆ ಸೇರಿ ಒಲವ ಹಂಚಿಕೊಳ್ಳ ಬಯಸುವ ಮನಸುಗಳಿಗೊಂದು ಕೆಂಪು ಛತ್ರಿ ನೆರಳಿನ ಆಸರೆ ಒದಗಿಸುತ್ತಿದ್ದ ಜಾಗತಿಕ ಬ್ರಾಂಡ್‌.

ಕರ್ನಾಟಕದ ಸಾಂಪ್ರದಾಯಿಕ ಕಾಫಿಯ ಹೆಸರಿನಲ್ಲಿ ‘ಕೆಫೆ ಕಾಫಿ ಡೇ’ (ಸಿಸಿಡಿ) ಎಂಬ ದೊಡ್ಡ ಸಾಮ್ರಾಜ್ಯವೇ ಸೃಷ್ಟಿಯಾಗಿದೆ. ಇದನ್ನು ಕಟ್ಟಿ ಬೆಳೆಸಿದ ಕೀರ್ತಿ ಸಿದ್ಧಾರ್ಥ ಅವರಿಗೇ ಸಲ್ಲಬೇಕು. ಇವರು ಕಾಫಿಗೆಜಾಗತಿಕ ಮನ್ನಣೆ ದೊರೆಕಿಸಿಕೊಟ್ಟ ಉದ್ಯಮಿ.

ADVERTISEMENT

ನಗರದಲ್ಲಿ ‘ಕೆಫೆ ಕಾಫಿ ಡೇ’ ಎಂಬ ಆಕರ್ಷಕ ಮಳಿಗೆ ಇಲ್ಲದ ವಾಣಿಜ್ಯ ಪ್ರದೇಶಗಳೇ ಇಲ್ಲ! ಬಿಸಿನೆಸ್‌ ಮೀಟಿಂಗ್‌ ಪಾಯಿಂಟ್‌, ಸ್ನೇಹಿತರ ಹರಟೆಗೆ ಮತ್ತು ಪ್ರೇಮಿಗಳು ಸಂಧಿಸುವ ಬಯಕೆಗೆ ಇದೊಂದು ಹ್ಯಾಂಗೌಟ್‌ ತಾಣ. ಮಗ್‌ ಅಳತೆಯ ಬಿಳಿ ಕಪ್‌ನಲ್ಲಿ ಕಾಫಿ ಮೇಲೆ ತೇಲುವ ಬೆಳ್‌ನೊರೆ, ಆ ನೊರೆಯಲ್ಲರಳುವ ಹಾರ್ಟ್‌ ಶೇಪ್‌ ಆಕರ್ಷಣೆಗೆ ಮರುಳಾಗದವರುಂಟೇ?

ಅಂತಹ ಲವಲವಿಕೆಯ ಕಾಫಿ ಅಡ್ಡಾದಲ್ಲಿ ಇಂದೇಕೋ ಎಂದಿನ ಕಲರವ ಇರಲಿಲ್ಲ. ಇದ್ದಕ್ಕಿದ್ದಂತೆ ಇಂದು ಬೆಳಿಗ್ಗೆಯಿಂದ ಆತಂಕ ಕವಿದಿತ್ತು. ಆದರೆ ವ್ಯಾಪಾರ ಮಾತ್ರ ಎಂದಿನಂತೆ ಸಾಗಿತ್ತು. ಉದ್ಯಮಿ ಸಿದ್ಧಾರ್ಥ ಕಾಣೆಯಾದ ಸುದ್ದಿಯೇ ಇದಕ್ಕೆ ಕಾರಣ. ಈ ಸುದ್ದಿಯಿಂದ ಸಹಜವಾಗಿ ‘ಕೆಫೆ ಕಾಫಿ ಡೇ’ ಮಳಿಗೆಗಳು ಎಲ್ಲರ ಕುತೂಹಲದ ಕೇಂದ್ರಗಳಾಗಿವೆ.

ಸಿಬ್ಬಂದಿ ಮಾತ್ರ ಎಂದಿನಂತೆ ಕೆಲಸದಲ್ಲಿ ತೊಡಗಿದ್ದರು. ತಮ್ಮ ಒಡೆಯ ಕಾಣೆಯಾದ ಸುದ್ದಿ ಬಗ್ಗೆ ಚಕಾರ ಎತ್ತದಸಿಬ್ಬಂದಿ ನಗುಮೊಗದಿಂದಲೇ ಗ್ರಾಹಕರನ್ನು ಸ್ವಾಗತಿಸಿ, ಎಂದಿನಂತೆ ಕಾಫಿ ಸರ್ವ್‌ ಮಾಡುತ್ತಿದ್ದರು.

ಮಹಾತ್ಮ ಗಾಂಧಿ ರಸ್ತೆಯ ಬಾರ್ಟನ್‌ ಸೆಂಟರ್‌ ಮುಂಭಾಗದಲ್ಲಿರುವ ಸಿಸಿಡಿಯಲ್ಲಿ ಕಾಫಿ ಹೀರುತ್ತ ಹರಟೆ ಹೊಡೆಯುತ್ತಿದ್ದವರ ಮಾತುಗಳು ಸಿದ್ಧಾರ್ಥ ನಾಪತ್ತೆ ಪ್ರಕರಣದ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು.

ಕಾಫಿ ಸರ್ವ್‌ ಮಾಡಿದ ಶಿವಮೊಗ್ಗ ಮೂಲದ ಟ್ರೇನಿ ಮಹಿಳಾ ಸಿಬ್ಬಂದಿಗೆ ಇವತ್ತು ರಜೆ ಇರಬೇಕಿತ್ತಲ್ಲ ಎಂದಾಗ, ಹಿಂಜರಿಯುತ್ತಲೇ ಮಾತಿಗಿಳಿದಳು. ‘ರಜೆ ಮಾಡುವ ಬಗ್ಗೆ ತಮಗೆ ಯಾವುದೇ ಸೂಚನೆ ಬಂದಿಲ್ಲ. ಹೊಸಬಳಾದ ಕಾರಣ ಹೆಚ್ಚಿನ ವಿಷಯ ಗೊತ್ತಿಲ್ಲ’ ಎಂದು ಜಾರಿಕೊಂಡಳು. ಆಕೆಯ ಮೊಗದಲ್ಲಿ ಆತಂಕದ ಛಾಯೆ ಕಾಣಿಸಲಿಲ್ಲ.

ಮಲ್ಲೇಶ್ವರದಲ್ಲಿರುವ ಕೆಫೆ ಕಾಫಿ ಡೇ ಮತ್ತು ಕಾಫಿ ಮಾರಾಟ ಮಳಿಗೆಗಳ ಸಿಬ್ಬಂದಿ ಮೊಗದಲ್ಲಿ ಆತಂಕ ಮನೆ ಮಾಡಿತ್ತು. ಒಡೆಯನಿಲ್ಲದ ಮನೆಯಂತೆ ಮೌನ ಆವರಿಸಿತ್ತು. ಎಂದಿನಂತೆ ತೆರೆದ ಕೆಫೆ ಕಾಫೀ ಡೇನಲ್ಲಿ ಸಿದ್ಧಾರ್ಥ ಕಾಣೆಯಾದ ಸುದ್ದಿಯದೇ ಗುಸು ಗುಸು.

‘ಉದ್ಯಮ ನಷ್ಟದಲ್ಲಿರುವ ಮತ್ತು ಬ್ರಾಂಡ್‌ ಮಾರಾಟದ ಗಾಸಿಪ್‌ ಕೂಡ ಇತ್ತು. ನಾವು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪ್ರತಿ ತಿಂಗಳೂ ಸರಿಯಾಗಿ ಸಂಬಳ ಬರುತ್ತಿದೆ. ನಮಗೆ ಯಾವುದೇ ತೊಂದರೆಯಾಗಿಲ್ಲ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ.

‘ಚಿಕ್ಕಮಗಳೂರು, ಶಿವಮೊಗ್ಗ ಭಾಗದ ನಿರುದ್ಯೋಗಿಗಳಿಗೆ ‘ಸಿಸಿಡಿ’ ಉದ್ಯೋಗ ನೀಡುವ ತಾಣ. ಫುಡ್ಸ್‌ ಆ್ಯಂಡ್‌ ಬ್ರೀವರೇಜಸ್ (ಎಫ್‌&ಬಿ) ತರಬೇತಿ ಬಳಿಕ ₹10–15 ಸಾವಿರ ಸಂಬಳದ ನೌಕರಿ ಇಲ್ಲಿದೆ. ತಾವೆಂದೂ ಸಿದ್ಧಾರ್ಥ ಅವರನ್ನು ನೇರವಾಗಿ ಭೇಟಿಯಾಗಿಲ್ಲ’ ಎನ್ನುವ ಸಜ್ಜನಿಕೆ ಇಲ್ಲಿನ ಸಿಬ್ಬಂದಿಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.