ADVERTISEMENT

ಅಮಿತಾ ಪ್ರಸಾದ್, ರಮಣರೆಡ್ಡಿ, ಟಿ.ಎಂ. ವಿಜಯ ಭಾಸ್ಕರ್ ವಿರುದ್ಧದ ಪ್ರಕರಣ ರದ್ದು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 0:37 IST
Last Updated 14 ಸೆಪ್ಟೆಂಬರ್ 2023, 0:37 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅನುದಾನ ದುರ್ಬಳಕೆ ಆರೋಪ ಎದುರಿಸುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಅಮಿತಾ ಪ್ರಸಾದ್,  ಇ.ವಿ. ರಮಣರೆಡ್ಡಿ ಹಾಗೂ ಟಿ.ಎಂ. ವಿಜಯ ಭಾಸ್ಕರ್ ಅವರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಈ ಮೂವರು ನಿವೃತ್ತ ಐಎಎಸ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣ ರದ್ದುಪಡಿಸಿ ಆದೇಶಿಸಿದೆ. ಅರ್ಜಿದಾರರ ಪರ ವಕೀಲ ಪಿ. ಪ್ರಸನ್ನಕುಮಾರ ವಾದ ಮಂಡಿಸಿದ್ದರು.

ಅಮಿತಾ ಪ್ರಸಾದ್, ರಮಣರೆಡ್ಡಿ, ವಿಜಯ ಭಾಸ್ಕರ್ ಅವರ ವಿರುದ್ಧ 23ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್‌ ನ್ಯಾಯಾಲಯದಲ್ಲಿ (ಭ್ರಷ್ಟಾಚಾರ ತಡೆ ಕಾಯ್ದೆ ವಿಶೇಷ ನ್ಯಾಯಾಲಯ) ನಡೆಯುತ್ತಿರುವ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆ ರದ್ದುಗೊಳಿಸಲಾಗಿದೆ. ಈ ಆದೇಶವು ಅರ್ಜಿದಾರರನ್ನು ಹೊರತುಪಡಿಸಿ ಪ್ರಕರಣದ ಇತರ ಆರೋಪಿಗಳ ವಿಚಾರಣೆಗೆ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

ಮೂವರು ಅಧಿಕಾರಿಗಳ ವಿರುದ್ಧ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಪೂರ್ವಾನುಮತಿ ಪಡೆದುಕೊಂಡಿಲ್ಲ. ಯೋಜನೆಯ ಅನುಷ್ಠಾನಕ್ಕೆೆ 2010ರ ಅ.1ರಂದು ಕೇಂದ್ರ ಸರ್ಕಾರದ ಕುಡಿಯವ ನೀರು ಸರಬರಾಜು ಮತ್ತು ನೈರ್ಮಲ್ಯ ಸಚಿವಾಲಯ, ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್ ನಡುವೆ ತ್ರಿಪಕ್ಷೀಯ ಒಪ್ಪಂದ ಆಗಿತ್ತು. ಮೂವರು ಅರ್ಜಿದಾರರ ಪೈಕಿ ಯಾರೊಬ್ಬರೂ ಆ ತ್ರಿಪಕ್ಷೀಯ ಒಪ್ಪಂದದ ಪಾಲುದಾರರು ಅಲ್ಲ. ಅಮಿತಾ ಪ್ರಸಾದ್ 2011ರ ಮೇ 16ರಿಂದ 2012ರ ಜೂನ್8ರ ವರೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ರಮಣರೆಡ್ಡಿ 2012ರ ಸೆ.22ರಿಂದ 2013ರ ಮೇ 31 ಹಾಗೂ ವಿಜಯ ಭಾಸ್ಕರ್ ಅವರು 2013ರ ಮೇ 31ರಿಂದ 2015ರ ಏಪ್ರಿಲ್ 24ರವರೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಜಯ ಭಾಸ್ಕರ್ ಅವರು ಹುದ್ದೆೆಯಿಂದ ನಿರ್ಗಮಿಸಿದ ಬಳಿಕ 2015ರ ಮೇ 4ರಂದು ಗ್ರಾಮೀಣ ನೀರು ಸರಬರಾಜು ಯೋಜನೆಯ ಆಯುಕ್ತರು ವರದಿ ಸಲ್ಲಿಸಿದ್ದು, ಅದರಲ್ಲಿ ‘ಹಣ ದುರ್ಬಳಕೆ’ ಆಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ, ಯಾವ ಅಧಿಕಾರಿಯ ಹೆಸರನ್ನೂ ಉಲ್ಲೇಖಿಸಿಲ್ಲ. ಈ ವರದಿಯ ಆಧಾರದಲ್ಲಿ ಲೆಕ್ಕಪರಿಶೋಧನೆ ನಡೆಸಲಾಗಿದ್ದು, 2015ರ ಅ.1ರಂದು ಸಲ್ಲಿಸಲಾದ ಆ ಲೆಕ್ಕಪರಿಶೋಧನಾ ವರದಿಯಲ್ಲಿ ಹಣ ದುರ್ಬಳಕೆಗೆ ಪಿ. ಬೋರೇಗೌಡ ಹಾಗೂ ರಾಮಕೃಷ್ಣ ಎಂಬುವರು ಹೊಣೆ ಎಂದು ಹೇಳಲಾಗಿತ್ತು. ಆ ವರದಿಯ ಆಧಾರದಲ್ಲಿ ದೂರು ದಾಖಲಿಸಲಾಗಿದ್ದು, ಅರ್ಜಿದಾರ ಅಧಿಕಾರಿಗಳ ವಿರುದ್ಧ ಅದರಲ್ಲಿ ಆರೋಪ ಮಾಡಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ದೂರು ಇಲ್ಲ, ಆರೋಪವೂ ಇಲ್ಲ. 2019ರ ಜ.9ರಂದು ಪೊಲೀಸರು ‘ಬಿ’ ರಿಪೋರ್ಟ್ ಕೂಡಾ ಹಾಕಿದ್ದಾರೆ. ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿಯೂ ಮೂವರು ಅರ್ಜಿದಾರರ ಹೆಸರು ಇಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಪ್ರಸ್ತಾಪಿಸಿದೆ.

ಪ್ರಕರಣ?

ಗ್ರಾಮೀಣ ಕುಡಿಯುವ ನೀರು ಯೋಜನೆಯ ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ರಾಜ್ಯಕ್ಕೆೆ ₹ 269 ಕೋಟಿ ನಷ್ಟವಾಗಿದೆ ಎಂಬ ಆರೋಪ ಮಾಡಲಾಗಿತ್ತು. ಇಲಾಖಾ ವಿಚಾರಣೆ, ಲೆಕ್ಕಪರಿಶೋಧನೆ, ಪೊಲೀಸ್ ಹಾಗೂ ಎಸಿಬಿ (ಲೋಕಾಯುಕ್ತ) ವಿಚಾರಣೆ ನಡೆದಿತ್ತು. ಈ ಮಧ್ಯೆೆ ಕೋಲಾರ ಮೂಲಕ ಸಾಮಾಜಿಕ ಕಾರ್ಯಕರ್ತ ವಿ. ನಾರಾಯಣಸ್ವಾಮಿ ಎಂಬವರು ಖಾಸಗಿ ದೂರು ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಅಂಗೀಕರಿಸಿ ವಿಚಾರಣಾ ನ್ಯಾಯಾಲಯ 2022ರ ಜ.13ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಮೂವರು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.