ADVERTISEMENT

ಹೈಕೋರ್ಟ್‌ ರಿಜಿಸ್ಟ್ರಾರ್‌ ವಿರುದ್ಧ ದಾವೆ; ಅರ್ಜಿದಾರರಿಗೆ ₹ 11 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 4:10 IST
Last Updated 29 ಜನವರಿ 2022, 4:10 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ ಅವರ ವಿರುದ್ಧ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದ ಕಾರ್ಕಳದ ಜಿತೇಂದ್ರ ಕುಮಾರ್ ರಾಜನ್ ಎಂಬುವರಿಗೆ ಹೈಕೋರ್ಟ್‌ ₹ 11 ಲಕ್ಷ ದಂಡ ವಿಧಿಸಿದೆ.

ಈ ಕುರಿತಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ, ’ದಂಡದ ಮೊತ್ತವನ್ನು 8 ವಾರಗಳಲ್ಲಿ ವಕೀಲರ ಪರಿಷತ್ತಿಗೆ ಪಾವತಿಸಬೇಕು. ನಿಗದಿತ ಅವಧಿಯಲ್ಲಿ ದಂಡದ ಮೊತ್ತ ಪಾವತಿಸದೇ ಹೋದಲ್ಲಿ ಜಿಲ್ಲಾಧಿಕಾರಿಗಳು ದಂಡ ವಸೂಲಿಗೆ ಕ್ರಮ ಕೈಗೊಳ್ಳಬೇಕು. ದಂಡದ ಮೊತ್ತ ಪಾವತಿಯಾಗದಿದ್ದರೆ ವಕೀಲರ ಪರಿಷತ್ತು ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಬಹುದು’ ಎಂದು ಆದೇಶಿಸಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು 2021ರ ಮೇ 19ರಂದು ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ₹ 1 ಲಕ್ಷ ದಂಡ ವಿಧಿಸಿತ್ತು. ದಂಡದ ಮೊತ್ತ ವಸೂಲಿ ಮಾಡುವಂತೆ ರಿಜಿಸ್ಟಾರ್ ಜನರಲ್ ಅವರಿಗೆ ನಿರ್ದೇಶಿಸಿತ್ತು.

ADVERTISEMENT

ದಂಡದ ಮೊತ್ತ ಪಾವತಿಸದ ಅರ್ಜಿದಾರರರು ರಿಜಿಸ್ಟ್ರಾರ್ ಜನರಲ್ ವಿರುದ್ಧ 11 ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಪೀಠ ಒಂದೊಂದು ಅರ್ಜಿಗೆ ತಲಾ ₹ 1 ಲಕ್ಷದಂತೆ ಒಟ್ಟು ₹ 11 ಲಕ್ಷ ದಂಡ ವಿಧಿಸಿ ಆದೇಶಿಸಿದೆ.

’ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ಮೇಲೆ ಸವಾರಿ ಮಾಡುವಹಾಗೂ ಸುಳ್ಳು ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸುವಪ್ರವೃತ್ತಿ ಹೆಚ್ಚಾಗುತ್ತಿದೆ. ಇದನ್ನು ಸಹಿಸುವುದಿಲ್ಲ‘ ಎಂದು ಹೇಳಿರುವ ನ್ಯಾಯಪೀಠ, ’ಈ ರೀತಿ ದಾವೆ ಹೂಡುವುದು ನ್ಯಾಯಾಂಗದ ಜೊತೆ ಅಣಕವಾಡಿದಂತೆ. ಹಾಗಾಗಿ, ಅರ್ಜಿದಾರರ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ‘ ಎಂದು ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.