ADVERTISEMENT

ಜಾತಿ ಗಣತಿ ವರದಿ: ಮುಖ್ಯಮಂತ್ರಿ ಮೇಲೆ ಒತ್ತಡ ತರಲು ನಿರ್ಧಾರ

ಅ.18 ರಂದು ಮಠಾಧೀಶರ ಸಭೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 19:17 IST
Last Updated 4 ಅಕ್ಟೋಬರ್ 2020, 19:17 IST
ಸಭೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ, ಎಚ್.ವಿಶ್ವನಾಥ್, ಮಾಜಿ ಸದಸ್ಯ ಎಚ್.ಎಂ. ರೇವಣ್ಣ ಮತ್ತು ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್ ಭಾಗವಹಿಸಿದ್ದರು - –ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ, ಎಚ್.ವಿಶ್ವನಾಥ್, ಮಾಜಿ ಸದಸ್ಯ ಎಚ್.ಎಂ. ರೇವಣ್ಣ ಮತ್ತು ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್ ಭಾಗವಹಿಸಿದ್ದರು - –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆದಿರುವ ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಸ್ವೀಕರಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಒತ್ತಡ ತರಲು ಅಕ್ಟೋಬರ್‌ 18 ರಂದು ಹಿಂದುಳಿದ ಜಾತಿಗಳ ಮಠಾಧೀಶರು ಮತ್ತು ಮುಖಂಡರ ಸಭೆ ನಡೆಯಲಿದೆ.

ಜಾತಿ ಗಣತಿ ವರದಿ ಸ್ವೀಕಾರಕ್ಕೆ ಆಗ್ರಹಿಸುವ ಕುರಿತು ಚರ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಉಪಸ್ಥಿತಿಯಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಸಚಿವರೇ ಈ ಸಲಹೆ ನೀಡಿದ್ದು, ಸಭೆಯಲ್ಲಿದ್ದ ಎಲ್ಲರೂ ಒಮ್ಮತದಿಂದ ಅದನ್ನು ಒಪ್ಪಿಕೊಂಡಿದ್ದಾರೆ.

68 ಜಾತಿಗಳ ಸಂಘಟನೆಗಳ ಪ್ರಮುಖರು ಭಾನುವಾರದ ಸಭೆಯಲ್ಲಿದ್ದರು. ಅ.18ರ ಸಭೆಗೆ ಹಿಂದುಳಿದ ವರ್ಗಗಳ ಎಲ್ಲ ಜಾತಿಗಳ ಮಠಾಧೀಶರು,ಪ್ರಮುಖ ರಾಜಕೀಯ ನಾಯಕರು ಮತ್ತು ಜಾತಿ ಸಂಘಟನೆಗಳ ಮುಖಂಡರನ್ನು ಒಗ್ಗೂಡಿಸಲು ನಿರ್ಧರಿಸಲಾಗಿದೆ. ಹಿಂದುಳಿದ ಜಾತಿಗಳ ಒಕ್ಕೂಟದ ನೇತೃತ್ವದಲ್ಲೇ ಈ ಸಭೆ ನಡೆಯಲಿದೆ.

ADVERTISEMENT

‘ಹೋರಾಟ ಅಲ್ಲ, ಮನವೊಲಿಕೆ’: ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸುವಂತೆ ಮುಖ್ಯಮಂತ್ರಿಯವರನ್ನು ಮನವೊಲಿಸುವ ಕೆಲಸವನ್ನು ನಾವು ಮಾಡಬೇಕು. ಯಾವುದೇ ಕಾರಣಕ್ಕೂ ಇದನ್ನು ಹೋರಾಟ ಎಂದು ಕರೆಯಬಾರದು’ ಎಂದರು.

‘ಮುಖ್ಯಮಂತ್ರಿ ಒಪ್ಪುತ್ತಾರೆ ಎಂಬ ವಿಶ್ವಾಸ ನನಗಿದೆ. ಎಲ್ಲ 198 ಜಾತಿಗಳನ್ನೂ ಒಳಗೊಂಡು ಅ.18 ರಂದು ಸಭೆ ನಡೆಸೋಣ. ವರದಿ ಪಡೆಯುವಂತೆ ಯಡಿಯೂರಪ್ಪ ಅವರನ್ನು ಮನವೊಲಿಸೋಣ. ಈ ಕೆಲಸವನ್ನು ಅವರು ಮುಕ್ತ ಮನಸ್ಸಿನಿಂದ ಮಾಡಲು ಸಿದ್ಧರಿದ್ದಾರೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

ಪರಿಸ್ಥಿತಿ ವಿವರಿಸಿದ ಕಾಂತರಾಜ್‌:ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದ ಅವಧಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಕಾಂತರಾಜ್‌ ಕೂಡ ಭಾನುವಾರದ ಸಭೆಯಲ್ಲಿ ಪಾಲ್ಗೊಂಡಿದ್ದರು. ತಮ್ಮನ್ನು ಮತ್ತು ಆಯೋಗದ ಸದಸ್ಯರನ್ನು ರಾಜ್ಯಸರ್ಕಾರ ವಜಾ ಮಾಡಿದ ಕಾರಣದಿಂದಾಗಿ ಆಯೋಗದ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಬೇಕಾಯಿತು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.