ADVERTISEMENT

‘ಜಾತಿ ಗಣತಿ ವರದಿ ಬಿಜೆಪಿಗೆ ಇಚ್ಛಾಶಕ್ತಿ ಇಲ್ಲ’

ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 1:27 IST
Last Updated 21 ಅಕ್ಟೋಬರ್ 2019, 1:27 IST

ಮೈಸೂರು: ಜಾತಿ ಗಣತಿ ವರದಿ ಜಾರಿ ಮಾಡಲು ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಚ್ಛಾಶಕ್ತಿಯೇ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಇಲ್ಲಿ ಹರಿಹಾಯ್ದರು.

‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಈ ವರದಿಯನ್ನು ಸಿದ್ಧಪಡಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಆದರೆ, ಇದನ್ನು ಅನುಷ್ಠಾನಕ್ಕೆ ತರಲು ಬಿಜೆಪಿಗೆ ಆಸಕ್ತಿಯೇ ಇಲ್ಲ. ಆ ಪಕ್ಷಕ್ಕೆ ಸಾಮಾಜಿಕ ನ್ಯಾಯದ ಬದ್ಧತೆ ಕೂಡ ಇಲ್ಲ. ಮುಸ್ಲಿಂ, ಕ್ರೈಸ್ತರನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ದಲಿತರು, ಹಿಂದುಳಿದವರ ಅಭಿವೃದ್ಧಿ ಬೇಕಾಗಿಲ್ಲ’ ಎಂದು ಆರೋಪಿಸಿದರು.

‘ಆಯಾ ಜಾತಿಯ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಸಂವಿಧಾನದ ಆಶಯಗಳಾದ ಸಮ ಸಮಾಜ ನಿರ್ಮಾಣ, ಸೌಹಾರ್ದಯುತ ಬದುಕು, ಸಮಾನತೆ ಜಾರಿಯಾಗಿ ಎಲ್ಲರಿಗೂ ಅವಕಾಶ ಸಿಕ್ಕಿದೆಯೇ ಎಂಬುದನ್ನು ತಿಳಿಯಬೇಕಿತ್ತು. ಅದಕ್ಕಾಗಿಯೇ ಜಾತಿ ಗಣತಿ ಮಾಡಿಸಿದ್ದೆ’ ಎಂದರು.

ADVERTISEMENT

ನಿರ್ಬಂಧ ಅಗತ್ಯವಿಲ್ಲ: ಸದನ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧ ಕುರಿತು ಪ್ರತಿಕ್ರಿಯಿಸಿ, ‘ಅವರ ಆಡಳಿತ ಪಾರದರ್ಶಕವಾಗಿಲ್ಲ. ಹೀಗಾಗಿಯೇ, ಸ್ಪೀಕರ್‌ಗೆ‍ ಹೇಳಿ ಮಾಧ್ಯಮದವರನ್ನು ಯಡಿಯೂರಪ್ಪ ಹೊರಹಾಕಿದ್ದಾರೆ’ ಎಂದು ಆರೋಪಿಸಿದರು.

ಅವಕಾಶ ಸಿಕ್ಕರೆ ಮತ್ತೆ ಸಿ.ಎಂ: ‘ಅವಕಾಶ ಸಿಕ್ಕಿದರೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ. ಇಲ್ಲದಿದ್ದರೆ ಮನೆಯಲ್ಲಿ ಇರುತ್ತೇನೆ’ ಎಂದು ಈ ವೇಳೆ ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.