ADVERTISEMENT

ಜಾತಿ ಜನಗಣತಿಯ ದತ್ತಾಂಶ ಸಾರ್ವಜನಿಕ ಚರ್ಚೆಗೆ: ಆಕ್ಷೇಪಣೆ– ಸಲಹೆ ಸ್ವೀಕಾರ?

ಆಕ್ಷೇಪಣೆ– ಸಲಹೆ ಸ್ವೀಕರಿಸಿ ಅಧಿವೇಶನದಲ್ಲಿ ಮಂಡಿಸಲು ಚಿಂತನೆ * ಸಚಿವ ಸಂಪುಟ ಸಭೆಗೆ ಪ್ರಸ್ತಾವ

ರಾಜೇಶ್ ರೈ ಚಟ್ಲ
Published 8 ಮೇ 2025, 23:35 IST
Last Updated 8 ಮೇ 2025, 23:35 IST
<div class="paragraphs"><p>ಸಿದ್ದರಾಮಯ್ಯ </p></div>

ಸಿದ್ದರಾಮಯ್ಯ

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ದತ್ತಾಂಶಗಳ ಅಧ್ಯಯನ ವರದಿಯಲ್ಲಿನ ಅಂಶಗಳನ್ನು ಸಾರ್ವಜನಿಕಗೊಳಿಸಿ, ಬಹಿರಂಗ ಚರ್ಚೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ADVERTISEMENT

ದತ್ತಾಂಶ ಅಧ್ಯಯನ ವರದಿಯಲ್ಲಿರುವ ಮಾಹಿತಿಗಳು ಬಹಿರಂಗಗೊಂಡ ಬೆನ್ನಲ್ಲೇ, ಪರ–ವಿರೋಧ ವ್ಯಕ್ತವಾಗಿತ್ತು. ಸಮುದಾಯದ ಒತ್ತಡಕ್ಕೆ ಮಣಿದ ಸಚಿವರು ಇದರ ಬಗ್ಗೆ ತಕರಾರು ತೆಗೆದಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೆ, ವರದಿಯ ದತ್ತಾಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿ, ಜನಸಂಖ್ಯಾವಾರು ಅಂಕಿ ಅಂಶದ ಚರ್ಚೆಯನ್ನು ವಿಶಾಲ ನೆಲೆಗೆ ಕೊಂಡೊಯ್ಯಲು ಸರ್ಕಾರ ಹೆಜ್ಜೆ ಇಟ್ಟಿದೆ. 

ಶುಕ್ರವಾರ (ಮೇ 9) ನಡೆಯಲಿರುವ ಸಚಿವ ಸಂಪುಟ ಸಭೆಗೆ ಈ ಕುರಿತ ಪ್ರಸ್ತಾವವನ್ನು ಮಂಡಿಸಿ ಅನುಮೋದನೆ ಪಡೆಯಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ಧರಿಸಿದೆ. ಸಭೆಗೆ ಸಿದ್ಧಪಡಿಸಿದ 21 ಪುಟಗಳ ವಿವರವಾದ ಟಿಪ್ಪಣಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ಜಾತಿ ಜನಗಣತಿ ವರದಿಯಲ್ಲಿರುವ ಅಂಶಗಳನ್ನು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಒಂದು ತಿಂಗಳು ಪ್ರಚಾರಪಡಿಸಿ ದೃಢೀಕರಿಸಲು ಮತ್ತು ಈ ಅವಧಿಯಲ್ಲಿ ವರದಿಗೆ ಸಂಬಂಧಿಸಿದಂತೆ ಆಕ್ಷೇಪಣೆ– ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಮುಂದಡಿ ಇಟ್ಟಿದೆ. ಅಲ್ಲದೆ, ಸ್ವೀಕೃತಗೊಳ್ಳುವ ಆಕ್ಷೇಪಣೆ– ಸಲಹೆಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ವಿಧಾನಮಂಡಲ ಅಧಿವೇಶನದ ಉಭಯ ಸದನಗಳಲ್ಲಿ ವಿಷಯ ಮಂಡಿಸುವ ಬಗ್ಗೆಯೂ ಚರ್ಚೆ ನಡೆದಿದೆ. ವರದಿಯಲ್ಲಿರುವ ಶಿಫಾರಸುಗಳ ವಿವರಗಳನ್ನು ಹೈಕೋರ್ಟ್‌ ಗಮನಕ್ಕೆ ತರಲು ಕೂಡಾ ನಿರ್ಧರಿಸಿದೆ. ಈ ಎಲ್ಲ ಅಂಶಗಳನ್ನು ಪ್ರಸ್ತಾಪಿಸಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಸಚಿವ ಸಂಪುಟ ಸಭೆಯ ಅನುಮೋದನೆ ಕೋರಿದೆ. 

ಇದೇ ಏಪ್ರಿಲ್‌ 11ರಂದು ನಡೆದ ಸಚಿವ ಸಂಪುಟ ಸಭೆ ಮತ್ತು 17ರಂದು ನಡೆದ ವಿಶೇಷ ಸಚಿವ ಸಂಪುಟ ಸಭೆಗೆ ಜಾತಿ ಜನಗಣತಿ ವರದಿಯನ್ನು ಇಲಾಖೆ ಮಂಡಿಸಿತ್ತು. 17ರಂದು ನಡೆದ ಸಭೆಯಲ್ಲಿ ಸಮೀಕ್ಷೆಯ ದತ್ತಾಂಶಗಳ ಕುರಿತು ಸುದೀರ್ಘ ಚರ್ಚೆ ನಡೆದು, ಹೆಚ್ಚಿನ ಚರ್ಚೆಗಾಗಿ ತಾಂತ್ರಿಕ ಮಾಹಿತಿಯೂ ಸೇರಿದಂತೆ ಇನ್ನಷ್ಟು ವಿವರ ಅಗತ್ಯ ಇದೆ ಎಂದು ಸಚಿವರು ಬೇಡಿಕೆ ಇಟ್ಟಿದ್ದರು. ಹೀಗಾಗಿ ಅದನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅಂದಿನ ಸಭೆಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸಚಿವರು ವರದಿಯ ಬಗ್ಗೆ ಹೆಚ್ಚಿನ ವಿವರಣೆ ಕೇಳಿದ್ದರು. ವಿವರ ನೀಡುವಂತೆ ಇಲಾಖೆಗೆ ಸೂಚಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಲಿಖಿತವಾಗಿ ಅಭಿಪ್ರಾಯ ತಿಳಿಸುವಂತೆ ಸಚಿವರಿಗೆ ಸಲಹೆ ನೀಡಿದ್ದರು. ಚರ್ಚೆ ಅಪೂರ್ಣಗೊಂಡಿದ್ದರಿಂದ ಮೇ 2ರಂದು ಸಚಿವ ಸಂಪುಟ ಸಭೆ ನಡೆಸಿ ಚರ್ಚಿಸಲು ತೀರ್ಮಾನಿಸಲಾಗಿತ್ತು. ಆದರೆ, ಮೇ 2ರಂದು ಸಭೆ ನಡೆದಿಲ್ಲ.

ಟಿಪ್ಪಣಿಯಲ್ಲಿ ಏನಿದೆ: ಸಮೀಕ್ಷೆಯ ದತ್ತಾಂಶಗಳ ವಿವರ ಹಾಗೂ ಅಧ್ಯಯನ ವರದಿಯ ಕುರಿತಂತೆ ಹೈಕೋರ್ಟ್‌ನಲ್ಲಿ ಹಲವು ರಿಟ್‌ ಅರ್ಜಿಗಳು ದಾಖಲಾಗಿವೆ. ಕೆಲವು ರಿಟ್‌ ಅರ್ಜಿಗಳನ್ನು ಒಗ್ಗೂಡಿಸಲಾಗಿದ್ದು, ಮುಂದಿನ ವಿಚಾರಣೆ ಜುಲೈ 17ರಂದು ನಡೆಯಲಿದೆ. ಪ್ರವರ್ಗ 2ಬಿಗೆ (ಮುಸ್ಲಿಂ ಸಮುದಾಯ) ನೀಡಿದ್ದ ಶೇ 4 ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ರಿಟ್‌ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ಎಲ್ಲ ರಿಟ್‌ ಅರ್ಜಿಗಳ ವಿವರಗಳನ್ನು ಸಚಿವ ಸಂಪುಟ ಸಭೆಯ ಟಿಪ್ಪಣಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿವರವಾಗಿ ನೀಡಿದೆ.

‘ನ್ಯಾಯಾಲಯದ ಅನುಮತಿ ಇಲ್ಲದೇ ಮೀಸಲಾತಿ ಶೇಕಡಾವಾರು ಪ್ರಮಾಣವನ್ನು ಮತ್ತು ಸಮುದಾಯಗಳ ಸಂಯೋಜನೆಯನ್ನು (ಪ್ರವರ್ಗವಾರು) ವ್ಯತ್ಯಯಗೊಳಿಸುವುದಿಲ್ಲ’ ಎಂದು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಈಗಾಗಲೇ ಪ್ರಮಾಣಪತ್ರ ಸಲ್ಲಿಸಿದೆ. ಹಿಂದುಳಿದ ವರ್ಗಗಳ ಕಾಯ್ದೆಯ ಪ್ರಕಾರ ರಾಜ್ಯ ಸರ್ಕಾರವು ಪ್ರತಿ 10 ವರ್ಷಗಳಿಗೆ ಒಮ್ಮೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸಬೇಕಾಗಿದೆ. ಈ ಪರಿಷ್ಕರಣೆ ಉದ್ದೇಶದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ’ ಎಂದೂ ಇಲಾಖೆ ಸಮರ್ಥನೆ ನೀಡಿದೆ.

ಟಿಪ್ಪಣಿಯ ಜೊತೆಗೆ, ಜಾತಿ ಜನಗಣತಿ ವರದಿಯ ಕುರಿತು ಸಾರ್ವಜನಿಕವಾಗಿ ಚರ್ಚೆ ಆಗುತ್ತಿರುವ ಅಂಶಗಳ ಬಗ್ಗೆ ಪ್ರಶ್ನೆ ಮತ್ತು ಉತ್ತರ ಮಾದರಿಯಲ್ಲಿ ಎಂಟು ಪುಟಗಳಲ್ಲಿ ಇಲಾಖೆ ಮಾಹಿತಿ ನೀಡಿದೆ. ಈ ಸಮೀಕ್ಷೆ ಜಾತಿ ಗಣತಿಯೇ ಅಥವಾ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೇ? ಸರ್ವೇ ಕಾರ್ಯ ಮಾಡುವಾಗ ಜಾತಿಯನ್ನು ದೃಢೀಕರಿಸಿದವರು ಯಾರು? ಎಲ್ಲಿಯೊ ಕುಳಿತು ಕೆಲವು ಜಾತಿಗಳಿಗೆ ಅನುಕೂಲವಾಗುವಂತೆ ಸಮೀಕ್ಷೆ ಮಾಡಿ ಕೆಲವು ಜಾತಿಗಳನ್ನು ಕಡಿಮೆ ತೋರಿಸಿದ್ದಾರೆಯೇ? ಒಂದು ಜಾತಿಯವರಿಗೆ ಅನುಕೂಲ ಮಾಡಿಕೊಡಲು ಸರ್ವೆ ಕಾರ್ಯ ಮಾಡಲಾಗಿದೆಯೇ? ಮುಸ್ಲಿಂ ಧರ್ಮವಲ್ಲವೇ, ಜಾತಿ ಎಂದು ಪರಿಗಣಿಸಿರುವುದು ಹೇಗೆ? ಮುಂತಾದ 14 ಪ್ರಶ್ನೆಗಳಿಗೆ ಇಲಾಖೆಯು ಉತ್ತರ ನೀಡಿದೆ.

ಮುಸ್ಲಿಮರ ಜನಸಂಖ್ಯೆಯ ವಾಸ್ತವವೇನು?

‘ಸಮೀಕ್ಷಾ ವರದಿಯಲ್ಲಿ ಮುಸ್ಲಿಂ ಸಮುದಾಯವರ ಜನಸಂಖ್ಯೆ ಹೆಚ್ಚು ತೋರಿಸಲಾಗಿದೆ ಎಂಬ ಅಂಶವು ಸತ್ಯಕ್ಕೆ ದೂರವಾಗಿದೆ. ಕಾರಣವೇನೆಂದರೆ, 2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ 78,93,065. ಅಂದರೆ, ಒಟ್ಟು ಜನಸಂಖ್ಯೆಗೆ ಶೇ 12.91ರಷ್ಟಿತ್ತು. 2015 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಕಾರ ಮುಸ್ಲಿಂ ಜಾತಿಯ ಎಲ್ಲ ಉಪ ಜಾತಿಗಳ ಒಟ್ಟು ಜನಸಂಖ್ಯೆ 76,98,425. ರಾಜ್ಯದ ಒಟ್ಟು ಜನಸಂಖ್ಯೆಯ ಶೇ 12.87. ಹೀಗಾಗಿ, ಸಮೀಕ್ಷಾ ವರದಿಯಲ್ಲಿ ಮುಸ್ಲಿಂ ಸಮುದಾಯದಜನಸಂಖ್ಯೆಯನ್ನು ಹೆಚ್ಚು ತೋರಿಸಿದ್ದಾರೆ ಎಂದು ಹೇಳುವ ಮಾತಿನಲ್ಲಿ ಹುರುಳಿಲ್ಲ’ ಎಂದು ಸಚಿವ ಸಂಪುಟ ಸಭೆಗೆ ಸಲ್ಲಿಸಿರುವ ಅನುಬಂಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.