ADVERTISEMENT

ಕ್ಯಾಟ್‌ ಪರೀಕ್ಷೆ: ಉಡುಪಿಯ ನಿರಂಜನ್‌ ದೇಶಕ್ಕೆ ಪ್ರಥಮ

ಶೇ 100 ಫಲಿತಾಂಶ ಪಡೆದು ಸಾಧನೆ

ಬಾಲಚಂದ್ರ ಎಚ್.
Published 7 ಜನವರಿ 2019, 1:31 IST
Last Updated 7 ಜನವರಿ 2019, 1:31 IST
ನಿರಂಜನ ಪ್ರಸಾದ್‌
ನಿರಂಜನ ಪ್ರಸಾದ್‌   

ಉಡುಪಿ: ಈ ಸಾಲಿನ ಕ್ಯಾಟ್‌ (ಸಾಮಾನ್ಯ ಪ್ರವೇಶ ಪರೀಕ್ಷೆ) ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಉಡುಪಿಯ ನಿರಂಜನ ಪ್ರಸಾದ್‌ ಶೇ 100 ಫಲಿತಾಂಶ ಪಡೆದು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ದೇಶದ ಪ್ರತಿಷ್ಠಿತ ಐಐಎಂ ಹಾಗೂ ಬ್ಯುಸಿನೆಸ್‌ ಸ್ಕೂಲ್‌ಗಳಲ್ಲಿ ಪ್ರವೇಶ ಪಡೆಯಲು ಇದೇ ನವೆಂಬರ್‌ನಲ್ಲಿ ಕ್ಯಾಟ್‌ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದ 2.9 ಲಕ್ಷ ವಿದ್ಯಾರ್ಥಿಗಳ ಪೈಕಿ ದೇಶದ 11 ಮಂದಿ ಮಾತ್ರ ಶೇ 100 ಫಲಿತಾಂಶ ಪಡೆದಿದ್ದಾರೆ. ಇವರ ಪೈಕಿ ಕರ್ನಾಟಕದ ಏಕೈಕ ವಿದ್ಯಾರ್ಥಿ ನಿರಂಜನ ಪ್ರಸಾದ್ ಎಂಬದು ವಿಶೇಷ.

ನಿರಂಜನ ಪ್ರಸಾದ್ ಉಡುಪಿಯ ಮಣಿಪಾಲದವರು. ಪ್ರಸ್ತುತ ಮದ್ರಾಸ್‌ ಐಐಟಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ)ಯಲ್ಲಿ ಮೆಕಾನಿಕಲ್‌ ಡ್ಯುಯಲ್‌ ಡಿಗ್ರಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ಜಯದೇವ ಪ್ರಸಾದ್ ಮೊಳೆಯಾರ್ ಮೂಡುಬಿದಿರೆಯ ಮೈಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥರು. ತಾಯಿ ಕೀರ್ತನಾ ಪ್ರಸಾದ್‌ ಮಣಿಪಾಲ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.

ADVERTISEMENT

ಸಾಧನೆಯ ಹಾದಿ ಹಾಗೂ ಭವಿಷ್ಯದ ಕನುಸಗಳ ಕುರಿತು ನಿರಂಜನ ಪ್ರಸಾದ್ ‘ಪ್ರಜಾವಾಣಿ’ ಜತೆ ಮುಕ್ತವಾಗಿ ಮಾತನಾಡಿದರು.

‘ಫಲಿತಾಂಶ ಸಹಜವಾಗಿ ತುಂಬಾ ಖುಷಿಕೊಟ್ಟಿದೆ. ದೇಶದ ಪ್ರಮುಖ 7 ಐಐಎಂಗಳಿಂದ ಪ್ರವೇಶಕ್ಕೆ ಆಹ್ವಾನ ಬರುವ ನಿರೀಕ್ಷೆ ಇದೆ. ಮುಂದೆ ತಾಂತ್ರಿಕ ಕ್ಷೇತ್ರದಲ್ಲಿ ಮುಂದುವರಿಯಬೇಕೇ, ಮ್ಯಾನೇಜ್‌ಮೆಂಟ್‌ ಕ್ಷೇತ್ರಕ್ಕೆ ಕಾಲಿರಿಸಬೇಕೇ ಎಂಬ ಗೊಂದಲಗಳಿವೆ. ವಿದೇಶದಲ್ಲಿ ಮಾಸ್ಟರ್ ಪ್ರೋಗ್ರಾಂ ಮಾಡುವ ಆಸೆಯೂ ಇದೆ. ಹಿರಿಯರ ಹಾಗೂ ಪೋಷಕರ ಬಳಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದರು.

‘ಅರ್ಥಶಾಸ್ತ್ರ ಆಸಕ್ತಿಯ ವಿಷಯ. ಭಾರತದ ಆರ್ಥಿಕ ಕ್ಷೇತ್ರದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ. ದೇಶದ ಆರ್ಥಿಕ ಪ್ರಗತಿಗೆ ಬಹುದೊಡ್ಡ ಕೊಡುಗೆ ನೀಡಬೇಕು ಎಂಬ ಕನಸಿದೆ. ಅದನ್ನು ಸಾಕಾರಗೊಳಿಸಲು ಶ್ರಮಿಸುತ್ತೇನೆ’ ಎಂದು ಮನದಾಳ ಬಿಚ್ಚಿಟ್ಟರು.

‘ಸಾಧನೆಯ ಹಿಂದೆ ಪೋಷಕರ ಶ್ರಮ ಹಾಗೂ ಪ್ರೋತ್ಸಾಹ ದೊಡ್ಡದು. ತಂದೆ ಆರ್ಥಿಕ ತಜ್ಞರಾಗಿದ್ದು, ಅವರೊಂದಿಗಿನ ಸಂವಾದ, ಚರ್ಚೆಗಳು, ಸಲಹೆ, ಸೂಚನೆಗಳು ಓದಿಗೆ ಪೂರಕವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಆಸೆಗಳಿಗೆ ಸದಾ ನೀರೆರೆದು ಪೋಷಿಸಿದರು’ ಎಂದು ಸ್ಮರಿಸಿದರು.

ಬ್ರಹ್ಮಾವರದ ಲಿಟಲ್‌ ರಾಕ್ ಶಾಲೆಯಲ್ಲಿ ಪಿಯುವರೆಗೂ ಶಿಕ್ಷಣ ಪಡೆದೆ. ಚೆಸ್‌, ಸ್ವಿಮ್ಮಿಂಗ್ ನೆಚ್ಚಿನ ಹವ್ಯಾಸಗಳು ಎಂದರು.

ಮಗನ ಸಾಧನೆ ಬಗ್ಗೆ ಹೆಮ್ಮೆ ಇದೆ

‌ಮಗನ ಸಾಧನೆಯ ಬಗ್ಗೆ ತಂದೆ ಜಯದೇವ ಪ್ರಸಾದ್ ಮೊಳೆಯಾರ್‌ ಅವರಿಗೆ ಹೆಮ್ಮೆ ಇದೆ. ‘ಆತ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದ. ನ್ಯಾಷನಲ್‌ ಟ್ಯಾಲೆಂಟ್ ಸರ್ಚ್‌ ಸ್ಪರ್ಧೆಯಲ್ಲಿ ಉನ್ನತ ರ‍್ಯಾಂಕಿಂಗ್ ಪಡೆದಿದ್ದ. ಸಿಇಟಿಯಲ್ಲಿ 23ನೇ ರ‍್ಯಾಂಕ್, ಮಣಿಪಾಲ ವಿಶ್ವವಿದ್ಯಾಲದಿಂದ 13ನೇ ರ‍್ಯಾಂಕ್‌ ಗಳಿಸಿದ್ದ’ ಎಂದರು.

ನಿರಂಜನ್‌ ತುಂಬಾ ಓದುತ್ತಿರಲಿಲ್ಲ. ಓದುವುದರಲ್ಲಿ ಶ್ರದ್ಧೆ ಇತ್ತು. ಲಾಜಿಕ್‌, ಸೆನ್ಸ್‌, ಸಂವಹನ, ಅರ್ಧಶಾಸ್ತ್ರ ಹಾಗೂ ಮ್ಯಾನೆಜ್‌ಮೆಂಟ್‌ ವಿಚಾರಗಳಲ್ಲಿ ತುಂಬಾ ಉತ್ಸುಕನಾಗಿದ್ದ. ಅವನ ವಿಚಾರಧಾರೆಗಳನ್ನು ಕೇಳುತ್ತಿದ್ದರೆ ದೇಶದ ಪ್ರಮುಖ ಆರ್ಥಿಕ ತಜ್ಞರ ಸಾಲಿನಲ್ಲಿ ನಿಲ್ಲುವ ವಿಶ್ವಾಸವಿದೆ ಎಂದು ಹೆಮ್ಮೆಪಟ್ಟರು.

ಕ್ಯಾಟ್‌ ಪರೀಕ್ಷೆಗೂ ಆತ ಕೋಚಿಂಗ್‌ ಪಡೆದಿರಲಿಲ್ಲ. ಮೊದಲ ಯತ್ನದಲ್ಲೇ ಯಶಸ್ಸು ಪಡೆದಿರುವುದು ವಿಶೇಷ. ಡೇಟಾ ಸೈನ್ಸ್‌ ಬಗ್ಗೆ ಕುತೂಹಲವಿದ್ದು, ಭಾರತದಲ್ಲಿ ಅಧ್ಯಯನಕ್ಕೆ ಹೆಚ್ಚಿನ ಸೌಲಭ್ಯಗಳಿಲ್ಲ. ಹಾಗಾಗಿ, ಅಮೇರಿಕಾದಲ್ಲಿ ಕಲಿತು ದೇಶಕ್ಕೆ ಮರಳುವ ಉದ್ದೇಶ ಹೊಂದಿದ್ದಾನೆ. ಸುಂದರ್ ಪಿಚೈ, ರಘುರಾಮ್ ರಾಜನ್ ಅವರಂತಹ ಸಾಧಕರ ಸಾಲಿನಲ್ಲಿ ಮಗ ನಿಲ್ಲಬೇಕು ಎಂದು ಮನದಾಳ ತೆರೆದಿಟ್ಟರು.

ಕ್ಯಾಟ್‌ ಪರೀಕ್ಷೆಯ ಫಲಿತಾಂಶದ ಪ್ರಕಾರ ಅಹಮದಾಬಾದ್‌ನ ಐಐಎಂನಲ್ಲಿ ಪ್ರವೇಶ ಸಿಗುವ ಸಾಧ್ಯತೆ ಇದೆ. ನಾನು ಕೂಡ 3 ದಶಕಗಳ ಹಿಂದೆ ಅಲ್ಲಿಯೇ ಓದಿದ್ದು ಎಂದರು.

ಜಿಆರ್‌ಇನಲ್ಲೂ ಸಾಧನೆ

ನಿರಂಜನ್‌ ಪ್ರಸಾದ್ ಈಚೆಗೆ ನಡೆದ ಜಿಆರ್‌ಇ ಪರೀಕ್ಷೆಯಲ್ಲಿ 340 ಅಂಕಗಳಿಗೆ 338 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದರು. ಫಲಿತಾಂಶದ ಪ್ರಕಾರ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ನಿರಂಜನ್‌ಗೆ ಪ್ರವೇಶಾತಿ ಸಿಗುವ ವಿಶ್ವಾಸವಿದೆ ಎಂದು ತಂದೆ ಜಯದೇವ ಪ್ರಸಾದ್ ಹೇಳಿದರು.

ಕ್ಯಾಟ್‌ ಪರೀಕ್ಷೆ ನಡೆಯುವುದು ಹೇಗೆ?

ಕ್ಯಾಟ್‌ ಪರೀಕ್ಷೆಯಲ್ಲಿ ಮೂರು ವಿಭಾಗಗಳಿವೆ. ಮೂರು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಒಂದೊಂದು ಹಂತಕ್ಕೆ ತಲಾ ಒಂದು ಗಂಟೆ ಕಾಲಾವಕಾಶ ಇರುತ್ತದೆ. ಒಂದು ಗಂಟೆಯಲ್ಲಿ 30 ಪ್ರಶ್ನೆಗಳಿಗೆ ಉತ್ತರಿಸಬೇಕಿರುತ್ತೆ. ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತ ಪರೀಕ್ಷೆ, ಕಿಷ್ಟಕರ ಸಮಸ್ಯೆಗಳನ್ನು ಬಿಡಿಸುವುದು ಸೇರಿದಂತೆ ಬುದ್ಧಿಶಕ್ತಿ ಪರೀಕ್ಷೆಗೊಳಪಡಿಸುವ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.