ADVERTISEMENT

ಕೆಪಿಎಲ್‌: ಕೆಎಸ್‌ಸಿಎ ತಂಡಗಳಿಗೆ ಸಿಸಿಬಿ ನೋಟಿಸ್‌

ಮ್ಯಾಚ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 20:15 IST
Last Updated 19 ನವೆಂಬರ್ 2019, 20:15 IST
   

ಬೆಂಗಳೂರು: ಕರ್ನಾಟಕ ಪ್ರಿಮಿಯರ್‌ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದ್ದು, ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಕೆಪಿಎಲ್‌ ತಂಡಗಳು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ನೋಟಿಸ್‌ ಜಾರಿ ಮಾಡಿದ್ದಾರೆ.

ಮ್ಯಾಚ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ನಲ್ಲಿ ತಂಡಗಳ ಮಾಲೀಕರು, ಕೋಚ್‌ಗಳು, ಕೋಚಿಂಗ್‌ ಕ್ಲಬ್‌ಗಳು, ಆಟಗಾರರು ಭಾಗಿಯಾಗಿರುವುದು ಕಂಡುಬಂದಿರುವುದರಿಂದ ನೋಟಿಸ್‌ ಜಾರಿ ಮಾಡಲಾಗಿದೆ. ನೋಟಿಸ್‌ನಲ್ಲಿ 18 ಅಂಶಗಳನ್ನು ಪ್ರಸ್ತಾಪಿಸಲಾಗಿದ್ದು, ಅವುಗಳಿಗೆ ವಿವರಣೆ ನೀಡುವಂತೆ ಕೇಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಯಾವ್ಯಾವ ತಂಡದಲ್ಲಿ ಯಾವ್ಯಾವ ಆಟಗಾರರು ಆಡುತ್ತಿದ್ದಾರೆ; ಅವರ ಹಿನ್ನೆಲೆ ಏನು; ಯಾವ ಕೋಚಿಂಗ್‌ ಕ್ಲಬ್‌ನಲ್ಲಿ ತರಬೇತಿ ಪಡೆದಿದ್ದಾರೆ. ಅವರ ಸಂಪರ್ಕಗಳೇನು; ತಂಡದ ಪಾಲುದಾರರು ಯಾರು ಎಂಬಿತ್ಯಾದಿ ಮಾಹಿತಿಗಳನ್ನು ಕೇಳಲಾಗಿದೆ. ಕೆಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆಟಗಾರರಿಗೆ ನೀಡಿರುವ ಮೌಲ್ಯ, ಆಟಗಾರರು ಗಳಿಸಿರುವ ರನ್‌, ವಿಕೆಟ್‌ಗಳು ಇತ್ಯಾದಿಗಳ ಮಾಹಿತಿ ಮತ್ತು ಪಂದ್ಯಗಳ ವಿಡಿಯೋ ನೀಡುವಂತೆ ಸೂಚಿಸಲಾಗಿದೆ. ನೋಟಿಸ್‌ಗೆ ಉತ್ತರ ಬಂದ ಬಳಿಕ ತನಿಖೆ ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದೂ ಮೂಲಗಳು ಹೇಳಿವೆ.

ADVERTISEMENT

ಪ್ರಕರಣದಲ್ಲಿ ಈಗಾಗಲೇ ಬೆಳಗಾವಿ ಪ್ಯಾಂಥರ್ಸ್‌ ತಂಡದ ನಾಯಕ ಅಲಿ ಅಶ್ಫಾಕ್ ತಾರ್‌, ಬಳ್ಳಾರಿ ಟಸ್ಕರ್ಸ್‌ ತಂಡದ ಭವೇಶ್‌, ನಾಯಕ ಸಿ.ಎಂ. ಗೌತಮ್‌, ಆಟಗಾರ ಅಬ್ರಾರ್‌ ಖಾಜಿ, ಬೆಂಗಳೂರು ಬ್ಲ್ಯಾಸ್ಟರ್ಸ್‌ ತಂಡದ ಬೌಲಿಂಗ್‌ ಕೋಚ್‌ ವಿನು ಪ್ರಸಾದ್‌, ಬ್ಯಾಟ್ಸ್‌ಮನ್‌ಗಳಾದ ವಿಶ್ವನಾಥನ್‌ ಮತ್ತು ನಿಶಾಂತ್‌ ಶೆಖಾವತ್‌, ಬುಕ್ಕಿ ಸಯ್ಯಾಂ ಅವರನ್ನು ಸಿಸಿಬಿ ಬಂಧಿಸಿದೆ. ತಲೆ ಮರೆಸಿಕೊಂಡಿರುವ ಬುಕ್ಕಿ ಜತಿನ್‌ ಬಂಧನಕ್ಕೆ ಲುಕ್‌ಔಟ್‌ ನೋಟಿಸ್‌ ಹೊರಡಿಸಲಾಗಿದೆ. ಆರೋಪಿಗಳು ನೀಡಿರುವ ಮಹತ್ವದ ಸುಳಿವುಗಳನ್ನು ಆಧರಿಸಿ ತನಿಖೆ
ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.