ADVERTISEMENT

ಶಾಸ್ತ್ರೀಯ ಅಧ್ಯಯನ ಕೇಂದ್ರ ಶೀಘ್ರವೇ ಕಾರ್ಯಾರಂಭ: ಸಿಟಿ ರವಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 21:30 IST
Last Updated 19 ಆಗಸ್ಟ್ 2020, 21:30 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ಕನ್ನಡ ಭಾಷಾ ಶಾಸ್ತ್ರೀಯ ಅಧ್ಯಯನ ಕೇಂದ್ರವು ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ಆರಂಭಿಸಲು ಶೀಘ್ರವೇ ಅನುಮತಿ ನೀಡುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೊಖ್ರಿಯಾಲ್‌ ಭರವಸೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ದೆಹಲಿಯಲ್ಲಿ ಪೊಖ್ರಿಯಾಲ್‌ ಅವರನ್ನು ಭೇಟಿಯಾಗಿ, ಅಧ್ಯಯನ ಪೀಠದ ಕಟ್ಟಡ ನಿರ್ಮಾಣ ಆರಂಭಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿ ಸಿದ ಪೊಖ್ರಿಯಾಲ್, ಕನ್ನಡಿಗರ ಬಹುದಿನಗಳ ಬೇಡಿಕೆಯಂತೆ ಆದಷ್ಟು ಶೀಘ್ರವೇ ಕಟ್ಟಡ ಪ್ರಾರಂಭಿಸಲು ಅನುಮತಿ ನೀಡಲಾಗುವುದು. ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ ಎಂದೂ ಹೇಳಿದರು.

ADVERTISEMENT

ಕರ್ನಾಟಕ ಸರ್ಕಾರ ಕಳಿಸಿರುವ ವಿಸ್ತೃತ ಯೋಜನಾ ವರದಿ ಸಿಕ್ಕಿದೆ. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು. ಬಳಿಕ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ಇದರಿಂದ ದೇಶದ ಪ್ರತಿಯೊಂದು ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಮನ್ನಣೆ ಸಿಗಲಿದೆ. ನಾಡು, ನುಡಿ, ಇತಿಹಾಸ, ಪರಂಪರೆ, ಸಂಪ್ರದಾಯಗಳು ಸೇರಿ ಸ್ಥಳೀಯ ಸಂಸ್ಕೃತಿಗೆ ಎಲ್ಲಿಯೂ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಸಚಿವ ಸಿ.ಟಿ.ರವಿ ಅವರು ಈವರೆಗೂ ಇಲಾಖೆ ವತಿಯಿಂದ ಕೈಗೊಂಡಿರುವ ಕಾರ್ಯ ಚಟುವಟಿಕೆಯ ವಿಸ್ತೃತ ವರದಿಯನ್ನು ಕೇಂದ್ರ ಸಚಿವರಿಗೆ ಹಸ್ತಾಂತರಿಸಿದರು.

ಈ ಭೇಟಿ ವೇಳೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಜತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.