ADVERTISEMENT

ಕೇಂದ್ರದ ಪ್ಯಾಕೇಜ್‌ ಪಾರದರ್ಶಕವಾಗಿಲ್ಲ, ಟೀಕಿಸಿದರೆ ದೇಶದ್ರೋಹಿ ಪಟ್ಟ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 8:27 IST
Last Updated 19 ಮೇ 2020, 8:27 IST
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಕೊರೊನಾದಿಂದ ಸಂಕಷ್ಟದಲ್ಲಿರುವವರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ಪಾರದರ್ಶಕತೆಯ ಕೊರತೆ ಇದೆ. ಈ ಘೋಷಣೆಗಳನ್ನು ಟೀಕಿಸಿದರೆ ದೇಶದ್ರೋಹಿಗಳೆಂದು ಬಿಂಬಿಸುತ್ತಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ, ರಾಜ್ಯ ಸರ್ಕಾರಗಳು ಸ್ವೇಚ್ಚಾಚಾರದಿಂದ ಪ್ಯಾಕೇಜ್‌ಗಳನ್ನು ಘೋಷಿಸಿವೆ. ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಹಲವು ತಜ್ಞರು ಸಲಹೆ ನೀಡುತ್ತಾರೆ. ಈ ಸಲಹೆಗಳ ಆಧಾರದ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಯಾವ ತಜ್ಞರಿಂದ ಮಾಹಿತಿ ಪಡೆದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೊ ಗೊತ್ತಿಲ್ಲ’ ಎಂದರು.

‘ಪರಿಹಾರ ಕೊಡುವುದು ಅಂದರೆ ಸಾಲ ನೀಡುವುದಲ್ಲ. ಆರೂವರೆ ಲಕ್ಷ ಕೋಟಿ ಮೊತ್ತ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಎರಡೂವರೆ ಸಾವಿರ ಕೋಟಿ ಮಾತ್ರ. ಇಂಥ ಪ್ಯಾಕೇಜ್ ನಿಂದ ಆರ್ಥಿಕ ಚೇತರಿಕೆ ಕಾಣಲು ತಕ್ಷಣಕ್ಕೆ ಸಾಧ್ಯವಿಲ್ಲ’ ಎಂದೂ ಅವರು ಅಭಿಪ್ರಾಯಪಟ್ಟರು.‌

ADVERTISEMENT

‘ನೋಟು ರದ್ಧತಿಯ ಬಳಿಕ ಸಣ್ಣ ಉದ್ಯಮ ನೆಲಕಚ್ಚಿತ್ತು. ಸಂಸ್ಥೆಗಳು ಆರ್ಥಿಕ ದಿವಾಳಿತನಕ್ಕೆ ಒಳಗಾಗಿವೆ. ಉದ್ಯಮಗಳ ದಿವಾಳಿತನದಿಂದ ಬ್ಯಾಂಕುಗಳು ಆರ್ಥಿಕವಾಗಿ ಕುಸಿತ ಕಂಡಿವೆ. ಇದನ್ನು ಸರಿಪಡಿಸಲು ಈ ಪ್ಯಾಕೇಜ್ ಘೋಷಿಸಿದ್ದಾರೆ. ಇದರಿಂದ ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಲು ಅಲ್ಲ’. ‘45 ಲಕ್ಷ ಎಂಎಸ್ಎಂಇಗಳಿಗೆ ಕೇಂದ್ರ ಪ್ಯಾಕೇಜ್ ಮಾಡಿದೆ. ಜಿಡಿಪಿಯಲ್ಲಿ ಒಂದು ಶೇಕಡಾ ಅಷ್ಟೇ ಈ ಪ್ಯಾಕೇಜ್‌ ಎಂಎಸ್ಎಂಇಗಳಿಗೆ ದೊಡ್ಡ ಮಟ್ಟದ ನೆರವಿಗೆ ಬರುವುದಿಲ್ಲ’ ಎಂದರು.

‘ಏಪ್ರಿಲ್‌ 23-24 ರಂದು 15ನೇ ಹಣಕಾಸು ಆಯೋಗದ ಸಲಹಾ ಸಮಿತಿ ಸಭೆ ನಡೆದಿದೆ. ದೇಶದ ಇಂದಿನ ಪರಿಸ್ಥಿತಿ ಹಿನ್ನೆಲೆ ಸದಸ್ಯರು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಕೋವಿಡ್ 19 ಹರಡುವ ಮೊದಲೇ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಒಳಗಾಗಿವೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಆರ್ಥಿಕವಾಗಿ ದಿವಾಳಿಯಾಗುವುದನ್ನು ಸರಿಮಾಡುವ ನಿಟ್ಟಿನಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆಯೂ ಸಲಹೆ ನೀಡಿದ್ದಾರೆ. ಸಾಂಕ್ರಾಮಿಕ ರೋಗದಿಂದ ಪಾರಾಗುವ ನಿಟ್ಟಿನಲ್ಲೂ ಕೇಂದ್ರ– ರಾಜ್ಯ ಸರ್ಕಾರದ ಹೊಣೆಗಾರಿಕೆ ಏನು’ ಎಂದು ಅವರು ಪ್ರಶ್ನಿಸಿದರು.

‘ಕೊರೊನಾದಿಂದ ಜಿಡಿಪಿ ಕುಸಿತದ ಬಗ್ಗೆ ಒಂದೊಂದು ಸಂಸ್ಥೆ ಒಂದೊಂದು ಅಂಕಿ ಸಂಖ್ಯೆ ನೀಡುತ್ತಿವೆ. ಹೀಗಾಗಿ ಜಿಡಿಪಿಯ ಕುರಿತು ಶ್ವೇತ ಪತ್ರ ಹೊರಡಿಸಬೇಕು’ ಎಂದೂ ಕುಮಾರಸ್ವಾಮಿ ಆಗ್ರಹಿಸಿದರು.

‘ಟಿಡಿಎಸ್ ಶೇ 25ರಷ್ಟು ಕಡಿತಗೊಳಿಸಲಾಗಿದೆ ಎಂದಿದ್ದಾರೆ. ಯಾವ ವ್ಯಕ್ತಿ ತೆರಿಗೆ ಕಟ್ಟುತ್ತಾರೋ, ಅವರು ಸೇವಾ ತೆರಿಗೆ ಕಟ್ಟಲೇಬೇಕು. ಟಿಡಿಎಸ್ ಮುಂದಿನ ದಿನಗಳಲ್ಲಿ ಕಟ್ಟಲೇಬೇಕು. ಟಿಡಿಎಸ್ ಹಣ ಯಾವ ಕಾರಣಕ್ಕೆ ಇಟ್ಟುಕೊಂಡಿದ್ದಾರೊ.‌ ಇದಕ್ಕೆ ಹಣಕಾಸು ಸಚಿವರೇ ಉತ್ತರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.