ADVERTISEMENT

ಕೇಂದ್ರೀಯ ವಿ.ವಿಯಲ್ಲಿ ರಾಮನವಮಿ ಸಂಘರ್ಷ: ವಿದ್ಯಾರ್ಥಿಗಳ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 17:26 IST
Last Updated 11 ಏಪ್ರಿಲ್ 2022, 17:26 IST
ಕಲಬುರಗಿ ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ
ಕಲಬುರಗಿ ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ   

ಕಲಬುರಗಿ: ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಸಂಜೆ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದ್ದು, ಜೇವರ್ಗಿ ತಾಲ್ಲೂಕು ಶಖಾಪುರ ಗ್ರಾಮದ ವಿಶ್ವನಾಥ ದಿವಾಣ ಮತ್ತು ರಾಜಸ್ಥಾನದ ನರೇಂದ್ರಕುಮಾರ್ ಧರಿಯಾ ಎಂಬ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

‘ವಿಶ್ವವಿದ್ಯಾಲಯದ ಆವರಣದಲ್ಲಿರುವ ಲಕ್ಷ್ಮಿ ಮಂದಿರದಲ್ಲಿ ನಾವು ರಾಮನವಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದೆವು. ಈ ಕಾರಣಕ್ಕಾಗಿಯೇ ಎಡಪಂಥೀಯ ವಿಚಾರಧಾರೆಯ ವಿದ್ಯಾರ್ಥಿಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಗಾಯಗೊಂಡಿರುವ ವಿಶ್ವನಾಥ ಆರೋಪಿಸಿದ್ದಾರೆ.

‘ಗೂಂಡಾಗಿರಿ ಪ್ರದರ್ಶಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ವಿ.ವಿ ಯಲ್ಲಿ ಹೆಚ್ಚಿ
ರುವ ಎಡಪಂಥೀಯ ಚಟುವಟಿಕೆಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನವರು ವಿ.ವಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ‘ದಲಿತ ವಿದ್ಯಾರ್ಥಿಯ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ಕೈಬಿಡಬೇಕು’ ಎಂದು ಆಗ್ರಹಿಸಿ ದಲಿತ ಸಂಘಟನೆಯವರು ಪ್ರತಿಯಾಗಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ವಿಶ್ವವಿದ್ಯಾಲಯ ಆವರಣದಲ್ಲಿ ಇಡೀ ದಿನ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.

ADVERTISEMENT

‘ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದೆ.ಸಾದಿಕ್‌, ರಾಹುಲ್‌, ರಾಹುಲ್‌ ಆರ್ಯ ಹಾಗೂ ಇನ್ನಿಬ್ಬರ (ಹೆಸರು ಉಲ್ಲೇಖಿಸಿಲ್ಲ) ವಿರುದ್ಧನರೋಣಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಪ್ರತಿಕ್ರಿಯಿಸಿದರು. ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳ ಅಡಿ ಪ್ರಕರಣ ದಾಖಲಾಗಿದೆ.

ಬೆದರಿಕೆ ಹಾಕಿದ್ದರು:‘ಎಬಿವಿಪಿ ಮತ್ತು ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಸಬಾರದು ಎಂದು ಇವರು ಈ ಮೊದಲಿನಿಂದಲೂ ನಮಗೆ ಬೆದರಿಕೆ ಹಾಕುತ್ತಿದ್ದರು. ನಾವು ರಾಮನವಮಿ ಅಂಗವಾಗಿ ಪೂಜೆ ಸಲ್ಲಿಸಿದ ಕಾರಣಕ್ಕಾಗಿಯೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಆಂಧ್ರಪ್ರದೇಶದ ಸಾದಿಕ್‌ ಎಂಬಿಎ ಓದುತ್ತಿದ್ದು, ರಾಹುಲ್‌ ಪಿಎಚ್‌.ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಇವರು ನನ್ನನ್ನು ಅಪಹರಿಸಲು ಮತ್ತು ಬ್ಲೇಡ್‌ನಿಂದ ಕುತ್ತಿಗೆ ಕೊಯ್ಯಲು ಯತ್ನಿಸಿದರು. ಇವರನ್ನು ಕಾಲೇಜಿನಿಂದ ವಜಾಗೊಳಿಸಬೇಕು‘ ಎಂದು ಕಲಬುರಗಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವಿದ್ಯಾರ್ಥಿ ವಿಶ್ವನಾಥ ಒತ್ತಾಯಿಸಿದರು.

ತನಿಖಾ ಸಮಿತಿ:‘ವಿಶ್ವವಿದ್ಯಾಲಯದ ಶಿಸ್ತು ಸಮಿತಿಯಿಂದ ತನಿಖೆ ನಡೆಸುತ್ತಿದ್ದೇವೆ. ವರದಿ ಬಂದ ನಂತರ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ‘ ಎಂದು ಕುಲಪತಿ
ಪ್ರೊ.ಬಿ. ಸತ್ಯನಾರಾಯಣ ಅವರು ಹೇಳಿದರು.

ಮತಾಂಧತೆ:‘ದೆಹಲಿಯ ಜವಾಹರಲಾಲ್‌ ನೆಹರೂ ವಿ.ವಿಗೆ ಮಾತ್ರ ಸೀಮಿತವಾಗಿದ್ದ ಈ ಮತಾಂಧತೆ ಕಲಬುರಗಿಗೂ ಕಾಲಿಟ್ಟಿರುವುದು ದುರಂತ. ಎಡಪಂಥೀಯ ವಿಚಾರಧಾರೆಯ ಈ ಗುಂಪುಗಳ ಚಟುವಟಿಕೆ ಹತ್ತಿಕ್ಕಬೇಕು. ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ವಜಾಗೊಳಿಸಿ, ಬಂಧಿಸಬೇಕು‘ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.