ADVERTISEMENT

ಕೇಂದ್ರ ಸರ್ಕಾರ ಕ್ಷಮೆ ಯಾಚಿಸಲಿ: ಡಿಕೆಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 18:22 IST
Last Updated 31 ಜನವರಿ 2022, 18:22 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಕೇಂದ್ರ ಸರ್ಕಾರವು ಪೆಗಾಸಸ್‌ ಕುತಂತ್ರಾಂಶ ಬಳಸಿ ಗಣ್ಯ ವ್ಯಕ್ತಿಗಳು ಮತ್ತು ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸಿರುವುದನ್ನು ಒಪ್ಪಿಕೊಂಡು, ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಭದ್ರತೆ ಹೆಸರಿನಲ್ಲಿ ಈ ರೀತಿಯ ಕದ್ದಾಲಿಕೆಯನ್ನು ಏಕೆ ಮಾಡಿದೆಯೋ ಗೊತ್ತಿಲ್ಲ. ಈ ವಿಚಾರದಲ್ಲಿ ದೇಶದ ಸರ್ಕಾರವು ಜನರ ಕ್ಷಮೆ ಯಾಚಿಸಬೇಕೆಂಬ ರಾಹುಲ್‌ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರ ನಿಲುವನ್ನು ನಾನೂ ಬೆಂಬಲಿಸುತ್ತೇನೆ’ ಎಂದರು.

ಸಿ.ಎಂ. ಇಬ್ರಾಹಿಂ ಮತ್ತು ಎಸ್‌.ಆರ್. ಪಾಟೀಲ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಎಸ್‌.ಆರ್‌. ಪಾಟೀಲ ಕಾಂಗ್ರೆಸ್‌ನ ಹಿರಿಯ ನಾಯಕರು. ಅವರೇನೂ ದಡ್ಡರಲ್ಲ. ಅಧಿಕಾರದ ಆಮಿಷಕ್ಕೆ ಒಳಗಾಗಿ ಈ ರೀತಿ ಚರ್ಚಿಸುವವರಲ್ಲ. ಇಬ್ರಾಹಿಂ ಕೂಡ ಹಿರಿಯ ನಾಯಕರು. ಇನ್ನೂ ನಮ್ಮ ಪಕ್ಷದಲ್ಲೇ ಇದ್ದಾರೆ. ಅವರೊಂದಿಗೆ ಪಾಟೀಲರು ಮಾತನಾಡುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರ ಮಂಗಳವಾರ ತನ್ನ ಬಜೆಟ್‌ ಮಂಡಿಸಲಿದೆ. ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ಪ್ರಕಟಿಸಬಹುದು ಎಂಬ ನಿರೀಕ್ಷೆ ಇದೆ. ಕೇಂದ್ರವು ಬಜೆಟ್‌ ಮಂಡಿಸಿದ ಬಳಿಕವೇ ಎಲ್ಲವೂ ಗೊತ್ತಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.