ADVERTISEMENT

ಈ ಸೈಕಲ್ ಬೆಲೆ ಕೇವಲ ₹12 ಲಕ್ಷ

ಮಂಗಳೂರಿನ ತಾಜ್ ಸೈಕಲ್ ಮಳಿಗೆಗೆ ಬಂದ ಸರ್ವೆಲೊ ಪಿಎಕ್ಸ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:16 IST
Last Updated 2 ಜೂನ್ 2020, 16:16 IST
ಮಂಗಳೂರಿನ ತಾಜ್ ಸೈಕಲ್ ಮಳಿಗೆಯಲ್ಲಿರುವ ‘ಸೆರ್ವೆಲೊ ಪಿಎಕ್ಸ್ ಸರಣಿಯ ಡುರಾ ಏಸ್ ಡಿಐ2 2020’ ಸೈಕಲ್ ಪ್ರದರ್ಶಿಸಿದ ಮೊಬಿನ್
ಮಂಗಳೂರಿನ ತಾಜ್ ಸೈಕಲ್ ಮಳಿಗೆಯಲ್ಲಿರುವ ‘ಸೆರ್ವೆಲೊ ಪಿಎಕ್ಸ್ ಸರಣಿಯ ಡುರಾ ಏಸ್ ಡಿಐ2 2020’ ಸೈಕಲ್ ಪ್ರದರ್ಶಿಸಿದ ಮೊಬಿನ್   

ಮಂಗಳೂರು: ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ತಾಜ್ ಸೈಕಲ್ ಕಂಪನಿ ಮಳಿಗೆಗೆ ಬಂದಿರುವ ‘ಸೆರ್ವೆಲೊ ಪಿಎಕ್ಸ್ ಸರಣಿಯ ಡುರಾ ಏಸ್ ಡಿಐ2 2020’ (Cervelo PX series Dura Ace Di2 2020) ಬೆಲೆ ಕೇವಲ ₹12 ಲಕ್ಷ.

‘ಈ ಮಾದರಿ ಸೈಕಲ್ ಭಾರತಕ್ಕೆ ಬಂದಿರುವುದೇ ಇದೇ ಮೊದಲು’ ಎನ್ನುತ್ತಾರೆ ಕಂಪೆನಿ ಮಾಲೀಕ ಮೊಬಿನ್.

ಟ್ರಯಾಥ್ಲಾನ್ ಸ್ಪರ್ಧೆಗೆ ಸೂಕ್ತವಾದಪಿಎಕ್ಸ್ ಸರಣಿಯ ಸೈಕಲ್ ಅತಿ ಹಗುರವಾಗಿದ್ದು, ಕಡಿಮೆ ಬೆಳಕಲ್ಲೂ ಆಕರ್ಷಕವಾಗಿ ಕಾಣುವ ನೆರಳುಗೆರೆ ವಿನ್ಯಾಸ ಹೊಂದಿದೆ. ಗಾಳಿಯನ್ನು ಛೇದಿಸಿಕೊಂಡು ಮುನ್ನುಗ್ಗುವ ರಚನೆಯಿದ್ದು, ಗಂಟೆಗೆ 35 ಕಿ.ಮೀ. ವೇಗದಲ್ಲಿ ಒಂದೇ ಬಾರಿಗೆ 180 ಕಿ.ಮೀ.ಗೂ ಹೆಚ್ಚು ಚಲಿಸಲು ಸಾಧ್ಯ. ಸೈಕ್ಲಿಂಗ್‌ನಲ್ಲಿ ಸೇವಿಸಲು ಬೇಕಾದ ಅಗತ್ಯ ಶಕ್ತಿ ಆಹಾರ, ನೀರನ್ನು ಇಡಲು ಸೌಲಭ್ಯ ಕಲ್ಪಿಸಲಾಗಿದೆ.

ADVERTISEMENT

ಸೈಕಲ್ ಅನ್ನು ಇಂಗಾಲದಿಂದ ಮಾಡಲಾಗಿದೆ. ಸುಧಾರಿತ ಗೇರ್‌ ಸಿಸ್ಟಮ್‌, 11X2 ಗೇರ್, ಬ್ರೇಕ್, ಫೋರ್ಕ್, ಸೀಟ್‌, ಹ್ಯಾಂಡಲ್‌ಗಳನ್ನು ಹೊಂದಿದ್ದು, ಸಂಪೂರ್ಣವಾಗಿ ಕಂಪ್ಯೂಟರೈಸ್ಡ್‌ ಸೆಟ್ಟಿಂಗ್‌ ಮಾಡಲಾಗಿದೆ. ಶಿಮಾನೊ ಸರ್ಟಿಫೈಡ್‌ ತಂತ್ರಜ್ಞರು ರೂಪಿಸಿದ್ದಾರೆ.

ಇದನ್ನು ಮೈಸೂರಿನ ಗ್ರಾಹರೊಬ್ಬರ ಬೇಡಿಕೆ ಮೇರೆಗೆ ಕೆನಡಾದಿಂದ ತರಿಸಲಾಗಿದ್ದು, ಸವಾರನ ಎತ್ತರ, ದೇಹ ರಚನೆ ಆಧಾರದಲ್ಲಿ ಹ್ಯಾಂಡಲ್‌, ಸೀಟು, ಗೇರ್ ನಿಯಂತ್ರಣ ಸೇರಿದಂತೆ ಸೈಕಲ್‌ ಅನ್ನು ಹೊಂದಾಣಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

‘ನಾವು ಈ ಹಿಂದೆ ₹5.9 ಲಕ್ಷ ಬೆಲೆಯ ಸೈಕಲ್ ಮಾರಾಟ ಮಾಡಿದ್ದೇವೆ. ಮಂಗಳೂರಿನಲ್ಲೂ ಈಗ ಸೈಕ್ಲಿಂಗ್‌ ಆಸಕ್ತಿ ಹೆಚ್ಚಾಗಿದೆ. ಆರೋಗ್ಯ ಹಾಗೂ ಕ್ರೀಡೆಗಾಗಿ ಸೈಕ್ಲಿಂಗ್ ಮಾಡುವವರು ಹೆಚ್ಚಾಗಿದ್ದಾರೆ’ ಎಂದು ಅವರು ವಿವರಿಸಿದರು.

ಮಂಗಳೂರಿನ ಎಸ್‌.ಎಂ. ಇಸ್ಮಾಯಿಲ್ 1927ರಲ್ಲಿ ನಗರದ ನೆಹರೂ ಮೈದಾನ ಬಳಿ ತಾಜ್ ಸೈಕಲ್ ಕಂಪೆನಿ ಸ್ಥಾಪಿಸಿದ್ದು, ಇಂಗ್ಲೆಂಡ್‌ ಮತ್ತಿತರ ದೇಶಗಳಿಂದ ಆಮದು ಮಾಡಿಕೊಡುತ್ತಿದ್ದರು. ಅವರ ಮಗಎಸ್‌.ಎಂ. ಮುತಾಲಿಕ್ ಹಾಗೂ ಮೊಮ್ಮಗ ಮೊಬಿನ್ ಈಗ ಮುನ್ನಡೆಸುತ್ತಿದ್ದಾರೆ. ಸದ್ಯ ನಗರದಲ್ಲಿ ನಾಲ್ಕು ಶಾಖೆಗಳಿವೆ. ತಾಜ್ ಕಂಪೆನಿಯು ಹಲವು ಸ್ಪರ್ಧೆಗಳನ್ನು ಏರ್ಪಡಿಸಿರುವುದಲ್ಲದೇ, ತರಬೇತು ಪಡೆದ ಸೈಕಲ್ ತಂತ್ರಜ್ಞರ ತಂಡವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.