ADVERTISEMENT

ಜುಲೈ 30–31ರಂದು ಸಿಇಟಿ ಪರೀಕ್ಷೆ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಸೆಪ್ಟೆಂಬರ್‌ ಮೊದಲ ವಾರ ಕಾಲೇಜುಗಳು ಆರಂಭ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 13:26 IST
Last Updated 13 ಮೇ 2020, 13:26 IST
ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: ಎಂಜಿನಿಯರಿಂಗ್ ಸಹಿತ ಹಲವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆಯಲು ಇರುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಜುಲೈ 30 ಮತ್ತು 31ರಂದು ನಡೆಸಲು ಸರ್ಕಾರ ನಿರ್ಧರಿಸಿದೆ.

‘ಈಗಾಗಲೇ ಸಿಬಿಎಸ್‌ಇ ಪರೀಕ್ಷೆಗಳು, ಜೆಇಇ, ನೀಟ್‌ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಹೀಗಾಗಿ ಸಿಇಟಿ ಪರೀಕ್ಷಾ ದಿನಾಂಕವನ್ನು ಇದೀಗ ನಿಗದಿಪಡಿಸಲಾಗಿದೆ. ಸರ್ಕಾರ ಏಪ್ರಿಲ್‌ 20ರಿಂದ ಆರಂಭಿಸಿರುವ ‘ಗೆಟ್‌ಸೆಟ್‌ಗೊ‘ ಸಿಇಟಿ ಆನ್‌ಲೈನ್ ಕೋಚಿಂಗ್ ಜುಲೈ 31ರವರೆಗೂ ಮುಂದುವರಿಯಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

‘ಈ ಬಾರಿ ಸುಮಾರು 1.92 ಲಕ್ಷ ಮಂದಿ ಪರೀಕ್ಷೆ ಬರೆಯಲಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಹಲವಾರು ಸಮಸ್ಯೆಗಳು ಉದ್ಭವವಾಗಿದ್ದರೂ, ಅವುಗಳನ್ನೆಲ್ಲ ಬಗೆಹರಿಸಿಕೊಂಡು ಹೋಗಲಾಗುತ್ತದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಲಿದೆ, ದ್ಚಿತೀಯ ಪಿಯುಸಿಯ ಇಂಗ್ಲಿಷ್‌ ಪರೀಕ್ಷೆಯ ದಿನಾಂಕವನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು’ ಎಂದರು.‌

ADVERTISEMENT

‘ಕೊರೊನಾ ಭೀತಿಯ ಕಾರಣಕ್ಕೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಪರೀಕ್ಷೆ ವೇಳೆ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗುವುದು’ ಎಂದರು.

ಶುಲ್ಕ ಹೆಚ್ಚಳಕ್ಕೆ ಬೇಡಿಕೆ: ‘ಎಂಜಿನಿಯರಿಂಗ್ ಕಾಲೇಜುಗಳು ಸಹ ಶುಲ್ಕ ಹೆಚ್ಚಳ ಮಾಡಲು ಬೇಡಿಕೆ ಸಲ್ಲಿಸಿವೆ. 7ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪಾವತಿಸಸಬೇಕಾದ ಒತ್ತಡದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿವೆ. ಆದರೆ ಸರ್ಕಾರ ಅದರ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ’ ಎಂದು ಸಚಿವರು ತಿಳಿಸಿದರು.

‘ವೈದ್ಯಕೀಯ ಸೀಟುಗಳನ್ನು ಬ್ಲಾಕ್‌ ಮಾಡುವ ದಂಧೆಯನ್ನು ತಡೆಗಟ್ಟುವ ಸಲುವಾಗಿ ಈ ಬಾರಿ ಹೊಸ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಹಳೆಯ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪ‍ತಿ ಅವರ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದೆ. ಅದರ ವರದಿಯಂತೆ ಕ್ರಮ ಜರುಗಿಸಲಾಗುವುದು. ಮಾಪ್ಅಪ್‌ ಸುತ್ತಿಗೆ ಮೊದಲೇ ಸೀಟನ್ನು ಬಿಟ್ಟುಕೊಡುವಂತಿದ್ದರೆ ಇಂತಹ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಈ ಬಾರಿ ಅಂತಹ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದರು.

ಗೆಟ್‌ಸೆಟ್‌ಗೊ: 76 ಸಾವಿರ ವಿದ್ಯಾರ್ಥಿಗಳು ಸಕ್ರಿಯ

‘ಕೊರೊನಾ ಲಾಕ್‌ಡೌನ್‌ನಿಂದಾಗಿ ಸಿಇಟಿ, ನೀಟ್‌ ಕೋಚಿಂಗ್ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಉಂಟಾಗಿತ್ತು. ಇದನ್ನು ಬಗೆಹರಿಸುವ ಸಲುವಾಗಿ ಸರ್ಕಾರ ಆರಂಭಿಸಿದ ‘ಗೆಟ್‌ಸೆಟ್‌ಗೊ’ ಆನ್‌ಲೈನ್ ಕೋಚಿಂಗ್‌ ತರಗತಿಗೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ. 76 ಸಾವಿರ ವಿದ್ಯಾರ್ಥಿಗಳು ಇಲ್ಲಿ ಸಕ್ರಿಯರಾಗಿದ್ದಾರೆ. 2,45,402 ಯೂಟ್ಯೂಬ್ ವಿಡಿಯೊಗಳನ್ನು ವೀಕ್ಷಿಸಿದ್ದಾರೆ‌’ ಎಂದು ಸಚಿವರು ತಿಳಿಸಿದರು.

getsetgo.in ಲ್ಯಾಂಡಿಂಗ್ ಪೇಜ್‌ಗೆ 1,69,510 ಮಂದಿ ಭೇಟಿ ನೀಡಿದ್ದಾರೆ. 76,913 ಮಂದಿ (38,479 ಆ್ಯಪ್‌ನಲ್ಲಿ, 38,434 ವೆಬ್‌ ಪೋರ್ಟಲ್‌ನಲ್ಲಿ) ಲಾಗಿನ್ ಮಾಡಿದ್ದಾರೆ. 55,130 ಮಂದಿ ಗೆಟ್‌ಸೆಟ್‌ಗೊ ಆ್ಯಂಡ್ರಾಯ್ಡ್‌ ಡೌನ್‌ಲೋಡ್ ಮಾಡಿದ್ದಾರೆ. 51,975 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. 1,68,294 ದಾಖಲೆಗಳನ್ನು ವಿದ್ಯಾರ್ಥಿಗಳು ಪರಿಶೀಲಿಸಿದ್ದಾರೆ’ ಎಂದರು.

‘ನೆಟ್‌ ಸಂಪರ್ಕ ಕ್ಷೀಣವಾಗಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಸುಲಭವಾಗಿ ಡೌನ್‌ಲೋಡ್ ಮಾಡುವ ರೀತಿಯಲ್ಲಿ ಆನ್‌ಲೈನ್‌ ಕಲಿಕೆಯ ಅವಕಾಶ ಕಲ್ಪಿಸಲಾಗಿದೆ. 3 ಎಂಬಿ ವೇಗದ ನೆಟ್‌ ಇರುವಲ್ಲಿ ಕಲಿಕಾ ಯೂಟ್ಯೂಬ್‌ಗಳನ್ನು ಡೌನ್‌ಲೋಡ್ ಮಾಡಿ ಆಫ್‌ಲೈನ್‌ನಲ್ಲಿ ಓದಿಕೊಳ್ಳಬಹುದು. ಗೂಗಲ್‌ ರಿವ್ಯೂ್‌ನಲ್ಲಿ ಈ ಆ್ಯಪ್‌ಗೆ 4 ಸ್ಟಾರ್‌ ರೇಟಿಂಗ್ ಇರುವುದು ನಮ್ಮ ಕೆಲಸವನ್ನು ಸಾರ್ಥಕಗೊಳಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.