ADVERTISEMENT

ವೃತ್ತಿಶಿಕ್ಷಣ: ಶುಲ್ಕ ಪಟ್ಟಿ ಪ್ರಕಟ ಕಡ್ಡಾಯ– ಜಿ.ಟಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 25 ಮೇ 2019, 17:42 IST
Last Updated 25 ಮೇ 2019, 17:42 IST
   

ಬೆಂಗಳೂರು: ‘ವೃತ್ತಿ ಶಿಕ್ಷಣ ಕೋರ್ಸ್‌ಗಳ ಅಧ್ಯಯನಕ್ಕೆ ವಿವಿಧ ಕೋಟಾಗಳಿಗೆ ಈಗಾಗಲೇ ನಿಗದಿ ಪಡಿಸಿರುವ ಶುಲ್ಕವನ್ನು ಕಾಲೇಜುಗಳಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಸಿಇಟಿ ಫಲಿತಾಂಶ ಪ್ರಕಟಣೆಯ ಪತ್ರಿಕಾಗೋಷ್ಠಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಖಾಸಗಿ ಕಾಲೇಜುಗಳು ಹೆಚ್ಚು ಶುಲ್ಕ ಭರಿಸಿಕೊಳ್ಳುವ ಕುರಿತು ದೂರುಗಳು ಬರುತ್ತಲೇ ಇವೆ. ಆದ್ದರಿಂದ ಶುಲ್ಕ ನಿಯಂತ್ರಣದ ಕುರಿತು ರೂಪರೇಷೆಗಳನ್ನು ರಚಿಸಲು ಸಮಿತಿ ರಚಿಸಲಾಗುವುದು. ಅದರ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ವಿವಿಧ ಶುಲ್ಕಗಳಿಂದ ಸಂಗ್ರಹಿಸಿದ ₹ 260 ಕೋಟಿ ಇದೆ. ಅದನ್ನು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಮೂಲಸೌಕರ್ಯಗಳ ಸುಧಾರಣೆಗೆ ಬಳಸುತ್ತೇವೆ. ಈ ಹಣ ಬಳಕೆಗಾಗಿ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳು(ದಾಖಲಾತಿ ಮತ್ತು ಪ್ರವೇಶ ಶುಲ್ಕ ನಿರ್ಣಯ) ಕಾಯ್ದೆ–2006ಕ್ಕೆ ತಿದ್ದುಪಡಿ ಮಾಡುತ್ತೇವೆ’ ಎಂದು ಹೇಳಿದರು.

‘ಮುಂದಿನ ವರ್ಷದಿಂದ ಆನ್‌ಲೈನ್‌ ಮೂಲಕ ಸಿಇಟಿ ಪರೀಕ್ಷೆ ನಡೆಸಲು ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿಯಿಂದ ಸಹಕಾರ ಪಡೆಯುತ್ತೇವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆನ್‌ಲೈನ್‌ ಪರೀಕ್ಷೆ ಎದುರಿಸುವ ಕುರಿತು ಕೌಶಲಾಭಿವೃದ್ಧಿ ಕೇಂದ್ರಗಳಲ್ಲಿ ತರಬೇತಿ ನೀಡುತ್ತೇವೆ. ಆ ಕೇಂದ್ರಗಳಲ್ಲಿ ಮಾದರಿ ಪರೀಕ್ಷೆಗಳನ್ನು ಬರೆಯಲು ಅವಕಾಶ ಮಾಡಿಕೊಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.