ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ–2025) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ಪ್ರಕಟಿಸಿದ್ದು, ಎಲ್ಲ ಏಳು ವಿಭಾಗಗಳಲ್ಲೂ ಮೊದಲ 10 ರ‍್ಯಾಂಕ್ ಪಡೆದವರಲ್ಲಿ ಬಾಲಕರೇ ಪಾರುಪತ್ಯ ಮೆರೆದಿದ್ದಾರೆ.
ಬಿ.ಎಸ್‌ಸಿ (ಕೃಷಿ), ಯೋಗ ಮತ್ತು ನ್ಯಾಚುರೋಪಥಿ ಹೊರತುಪಡಿಸಿ ಉಳಿದ ವಿಭಾಗಗಳಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಪಠ್ಯಕ್ರಮ ಓದಿದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಎಂಜಿನಿಯರಿಂಗ್‌ನಲ್ಲಿ ಮೊದಲ ಎಂಟು ಸ್ಥಾನಗಳು ಬೆಂಗಳೂರು ಪಾಲಾಗಿವೆ. ತಲಾ ಒಂದು ಸ್ಥಾನವನ್ನು ಮಂಗಳೂರು ಹಾಗೂ ಉಡುಪಿ ವಿದ್ಯಾರ್ಥಿಗಳು ಪಡೆದಿದ್ದಾರೆ. ಮೊದಲ ಮೂರು ಸ್ಥಾನಗಳನ್ನು ಬೆಂಗಳೂರಿನ ಚೈತನ್ಯ ಟೆಕ್ನೊ ಸ್ಕೂಲ್ ವಿದ್ಯಾರ್ಥಿಗಳು ಗಳಿಸಿದ್ದಾರೆ. ಪಶುವೈದ್ಯಕೀಯ ವಿಭಾಗದಲ್ಲಿ ಬೆಂಗಳೂರಿನ ನಾರಾಯಣ ಇ ಟೆಕ್ನೊ ಸ್ಕೂಲ್, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.
ಬಿ.ಎಸ್‌ಸಿ (ಕೃಷಿ) ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಪ್ರಥಮ, ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ. ಬಿ.ಎಸ್‌ಸಿ (ಕೃಷಿ)ಯಲ್ಲಿ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಮೊದಲ ಒಂಬತ್ತು ರ್‍ಯಾಂಕ್ ಪಡೆಯುವ ಮೂಲಕ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಸವಾಲು ಒಡ್ಡಿದ್ದಾರೆ.
ಪಶು ವೈದ್ಯಕೀಯ, ಎಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪಥಿ, ಕೃಷಿ ವಿಜ್ಞಾನ, ಬಿ. ಫಾರ್ಮಸಿ, ಫಾರ್ಮಾ ಡಿ ಮತ್ತು ಬಿ.ಎಸ್ಸಿ (ನರ್ಸಿಂಗ್) ಕೋರ್ಸುಗಳಿಗೆ ಕೆಇಎ ಏಪ್ರಿಲ್ 16 ಮತ್ತು 17ರಂದು ಸಿಇಟಿ ನಡೆಸಿತ್ತು.
‘ಭೌತ ವಿಜ್ಞಾನದಲ್ಲಿ ಒಂದು ಕೃಪಾಂಕ ನೀಡಲಾಗಿದೆ. ರಸಾಯನ ವಿಜ್ಞಾನದಲ್ಲಿ ಎರಡು ಪ್ರಶ್ನೆಗಳಿಗೆ, ಜೀವ ವಿಜ್ಞಾನದಲ್ಲಿ ಒಂದು ಪ್ರಶ್ನೆಗೆ ಎರಡು ಸರಿ ಉತ್ತರಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು, ಆ ಉತ್ತರಗಳನ್ನು ಗುರುತಿಸಿದವರಿಗೆ ಅಂಕ ನೀಡಲಾಗಿದೆ. ದ್ವಿತೀಯ ಪಿಯುನ ಎರಡು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸಿದ ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ರ್‍ಯಾಂಕ್ ಪಟ್ಟಿ ಸಿದ್ಧಪಡಿಸಲಾಗಿದೆ. ಇದೇ ಮೊದಲ ಬಾರಿ ಫಲಿತಾಂಶಕ್ಕೂ ಮೊದಲೇ 3 ಲಕ್ಷ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಮುಗಿಸಲಾಗಿದೆ. ಅಂಗವಿಕಲರಿಗೆ ಜೂನ್ 3ರಿಂದ 6ರವರೆಗೆ ವೈದ್ಯಕೀಯ ತಪಾಸಣೆ ನಡೆಯಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
3,30,787: ಸಿಇಟಿಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು
3,11,996: ಸಿಇಟಿ ಬರೆದವರು
775: ಪರೀಕ್ಷೆ ನಡೆದ ಕೇಂದ್ರಗಳು
ಫಲಿತಾಂಶ ತಡೆ: ಮೇ 26ರಿಂದ ಅವಕಾಶ
‘ನೋಂದಣಿ ಸಂಖ್ಯೆ ಸರಿಯಾಗಿ ನಮೂದಿಸದ ಕಾರಣಕ್ಕೆ ಸಿಇಟಿ-2025ರ ಫಲಿತಾಂಶ ತಡೆಹಿಡಿಯಲಾಗಿರುವ ಅಭ್ಯರ್ಥಿಗಳು, ಮೇ 26ರಿಂದ ಆನ್‌ಲೈನ್‌ಲ್ಲಿ ಅಂಕ ನಮೂದಿಸಲು ಅವಕಾಶ ನೀಡಲಾಗುವುದು’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.
‘ಸುಮಾರು 10 ಸಾವಿರ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸದ ಕಾರಣ ಅವರು ದ್ವಿತೀಯ ಪಿಯುನಲ್ಲಿ ಗಳಿಸಿದ ಅಂಕಗಳನ್ನು ನೇರವಾಗಿ ಪಡೆಯಲು ಸಾಧ್ಯವಾಗಿಲ್ಲ. ಅಂತಹ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿಲ್ಲ’ ಎಂದು ವಿವರಿಸಿದರು.
‘ಮೇ 26ರಿಂದ ತೆರೆಯಲಾಗುವ ವೆಬ್‌ಲಿಂಕ್‌ನಲ್ಲಿ ಅಭ್ಯರ್ಥಿಗಳು ನೋಂದಣಿ ಸಂಖ್ಯೆಯ ಜತೆಗೆ ಅಂಕಗಳನ್ನೂ ದಾಖಲಿಸಬೇಕು ಮತ್ತು ಅಂಕಪಟ್ಟಿಯನ್ನು ಅಪ್‌ಲೋಡ್ ಮಾಡಬೇಕು. ಅಭ್ಯರ್ಥಿಗಳು ದಾಖಲಿಸುವ ಅಂಕಗಳನ್ನು ಆಯಾ ಪರೀಕ್ಷಾ ಮಂಡಳಿಯಿಂದ ಪರಿಶೀಲಿಸಿ, ದೃಢೀಕರಿಸಿದ ನಂತರ ಸ್ಪಾಟ್ ರ‍್ಯಾಂಕ್’ ನೀಡಲಾಗುವುದು ಎಂದರು.
ಸುಚಿವ್ರತ್‌ಗೆ 2.06 ಲಕ್ಷ ರ್‍ಯಾಂಕ್
ಜನಿವಾರ ತೆಗೆಯಲು ನಿರಾಕರಿಸಿ, ಗಣಿತ ಪರೀಕ್ಷೆಗೆ ಹಾಜರಾಗದೇ ಮನೆಗೆ ತೆರಳಿದ್ದ ಬೀದರ್‌ನ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿ ಸಿಇಟಿಯಲ್ಲಿ 2.06 ಲಕ್ಷ ರ್‍ಯಾಂಕ್ ಪಡೆದಿದ್ದಾರೆ.
ಗಣಿತ ಪರೀಕ್ಷೆ ಬರೆಯಲು ಸಾಧ್ಯವಾಗದ ಸುಚಿವ್ರತ್‌ಗೆ ಅವರ ಕೋರಿಕೆಯಂತೆ ಭೌತ ವಿಜ್ಞಾನ ಹಾಗೂ ರಸಾಯನ ವಿಜ್ಞಾನ ವಿಷಯಗಳಲ್ಲಿ ಪಡೆದ ಸರಾಸರಿ ಅಂಕಗಳನ್ನು ಗಣಿತ ವಿಷಯಕ್ಕೆ ನೀಡಲಾಗಿತ್ತು.
‘ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಕಾರಣ ಸಿಇಟಿ ರ್‍ಯಾಂಕಿಂಗ್ ಕುಸಿದಿರಬಹುದು’ ಎಂದು ಸಚಿವ ಸುಧಾಕರ್ ಪ್ರತಿಕ್ರಿಯಿಸಿದರು.
ಕೋರ್ಸ್;ಅರ್ಹತೆ ಪಡೆದವರು
ಎಂಜಿನಿಯರಿಂಗ್; 2,62,195
ಯೋಗ ಮತ್ತು ನ್ಯಾಚುರೋಪಥಿ; 1,98,679
ಬಿ.ಎಸ್‌ಸಿ (ಕೃಷಿ); 2,14,588
ಪಶು ವೈದ್ಯಕೀಯ; 2,18,282
ಬಿ–ಫಾರ್ಮಾ; 2,66,256
ಫಾರ್ಮಾ–ಡಿ; 2,66,757
ಬಿ.ಎಸ್ಸಿ (ನರ್ಸಿಂಗ್); 2,08,171
ವಿವಿಧ ವಿಭಾಗಗಳಲ್ಲಿ ರ‍್ಯಾಂಕ್ ಪಡೆದವರ ವಿವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.