ADVERTISEMENT

ದಲಿತರಿಗೆ ಅನ್ಯಾಯ ಮಾಡಿದ್ದಕ್ಕೆ ಕುಂಟುತ್ತಿದ್ದೀರಿ: ನಾರಾಯಣಸ್ವಾಮಿ ವ್ಯಂಗ್ಯ

ಸಿ.ಎಂ ಮಂಡಿ ನೋವಿನ ಬಗ್ಗೆ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 15:20 IST
Last Updated 6 ಮಾರ್ಚ್ 2025, 15:20 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ‘ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ₹25 ಸಾವಿರ ಕೋಟಿ ಹಣ ಲೂಟಿ ಮಾಡಲಾಗಿದೆ. ಬಡವರಿಗೆ ಅನ್ಯಾಯ ಮಾಡಿದ್ದಕ್ಕೆ ಮುಖ್ಯಮಂತ್ರಿ ಕುಂಟುತ್ತಿದ್ದು, ವ್ಹೀಲ್ ಚೇರ್‌ನಲ್ಲಿ ಓಡಾಡುವಂತಾಗಿದೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಪರಿಶಿಷ್ಟರ ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿಯು ರಾಜ್ಯ ಸರ್ಕಾರದ ವಿರುದ್ಧ ಗುರುವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ದಲಿತರ ಹಣ ನುಂಗಿದ್ದಕ್ಕೆ ಅದು ನಿಮ್ಮ (ಮುಖ್ಯಮಂತ್ರಿ) ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದೆ. ನಮ್ಮ ಸಮುದಾಯಕ್ಕೆ ಮೋಸ ಮಾಡಿದರೆ ವ್ಹೀಲ್‌ ಚೇರ್‌ ಹೋಗಿ ಮುಂದೆ ಬೇರೆ ಚೇರ್ ಬರಲಿದೆ’ ಎಂದು ಎಚ್ಚರಿಸಿದರು. 

‘ಪರಿಶಿಷ್ಟ ಸಮುದಾಯದವರು ಉಚಿತ ಬಸ್‌ನಲ್ಲಿ ಓಡಾಡುವುದಿಲ್ಲ. ಮೋಜು, ಮಸ್ತಿ ಮಾಡುವುದಿಲ್ಲ. ಆದರೆ, ವಿಶೇಷ ಯೋಜನೆಯ ಹಣವನ್ನು ತೆಗೆದು ಸಿ.ಎಂ. ಖಾತೆಗೆ ಹಾಕಿಕೊಳ್ಳಲಾಗಿದೆ. ಇದು ಸಮುದಾಯಕ್ಕೆ ಮಾಡಿದ ಮೋಸ ಅಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ದಲಿತ ಸಮುದಾಯದ ಅಭಿವೃದ್ಧಿಗೆ ಹಣ ಬಳಕೆಯಲ್ಲಿ ಕರ್ನಾಟಕ ರಾಜ್ಯ 10ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ದಲಿತರಿಗೆ ಹಣ ಖರ್ಚು ಮಾಡುವ ನಿಟ್ಟಿನಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿ ಇರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ಅವರ ದಲಿತ ಪರ ಕಾಳಜಿ ಎಲ್ಲಿ ಹೋಗಿದೆ? ವಿರೋಧ ಪಕ್ಷದಲ್ಲಿದ್ದಾಗ ಇದ್ದ ದಲಿತ ಪರ ಕಾಳಜಿ ಅಧಿಕಾರಕ್ಕೆ ಬಂದ ಬಳಿಕ ಮರೆತುಹೋಯಿತೇ? ಮುಖ್ಯಮಂತ್ರಿ ಅಸಹಾಯಕರಾಗಿದ್ದಾರಾ? ಅಥವಾ ದಲಿತರ ಮೇಲಿನ ಕಾಳಜಿ ಮರೆತುಹೋಗಿದೆಯೇ ಎಂದು ಪ್ರಶ್ನಿಸಿದರು. 

‘ಯಾವುದೇ ಕಾರಣಕ್ಕೂ ಎಸ್‍ಸಿಎಸ್‌ಪಿ, ಟಿಎಸ್‍ಪಿ ಹಣವನ್ನು ದುರ್ಬಳಕೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕದಿರಿ. ದಲಿತರ ಕಣ್ಣಲ್ಲಿ ನೀರು ಬಂದರೆ, ಆ ಶಾಪ ಸರ್ಕಾರಕ್ಕೆ ತಟ್ಟದೆ ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರಿಪಬ್ಲಿಕ್ ಪಾರ್ಟಿಯ  ಎಂ.ವೆಂಕಟಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಮಾಜಿ ಶಾಸಕ ಸಂಪಂಗಿ, ಮುಖಂಡರಾದ ಹರಿರಾಮ್, ಜಗನ್ನಾಥ್, ಚಿ.ನಾ.ರಾಮು, ಮುನಿಕೃಷ್ಣ, ಸತೀಶ್, ಪಿ.ಮೂರ್ತಿ, ಮುನಿರಾಜು, ರಮೇಶ್, ಮಹೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.