ADVERTISEMENT

‘ಚಾಣಕ್ಯ’ ಹೆಸರಲ್ಲಿ ಆರ್‌ಎಸ್‌ಎಸ್‌ಗೆ ಜಮೀನು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 21:54 IST
Last Updated 22 ಸೆಪ್ಟೆಂಬರ್ 2021, 21:54 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ₹ 400 ಕೋಟಿಯ ಜಮೀನನ್ನು ಕೇವಲ ₹ 50 ಕೋಟಿಗೆ ನೀಡುವುದಕ್ಕಾಗಿ ಚಾಣಕ್ಯ ವಿಶ್ವವಿದ್ಯಾಲಯದ ಮಸೂದೆ ತರಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವನಹಳ್ಳಿ ಬಳಿಯ ಹರಳೂರು ಗ್ರಾಮದಲ್ಲಿ ಪ್ರತಿ ಎಕರೆ 1.50 ಕೋಟಿ ಪರಿಹಾರ ನೀಡಿ 116 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಿಕೊಂಡಿತ್ತು. ₹ 175 ಕೋಟಿ ಪರಿಹಾರ ನೀಡಿ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಈಗಿನ ಮೌಲ್ಯ ₹ 400 ಕೋಟಿ. ಅದನ್ನು ₹ 50 ಕೋಟಿಗೆ ನೀಡುತ್ತಿರುವುದು ನ್ಯಾಯವೆ’ ಎಂದು ಪ್ರಶ್ನಿಸಿದರು.

ಸೆಸ್‌ ಸಂಸ್ಥೆಯಲ್ಲಿರುವ ಎಲ್ಲರೂ ಆರ್‌ಎಸ್‌ಎಸ್‌ನವರು. ಯಾವುದೇ ಶಿಕ್ಷಣ ಸಂಸ್ಥೆ ನಡೆಸಿದ ಅನುಭವವೇ ಈ ಸಂಸ್ಥೆಗೆ ಇಲ್ಲ. ಈ ಸಂಸ್ಥೆಯಲ್ಲಿರುವವರೆಲ್ಲರೂ ಮನುವಾದಿಗಳು ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನು ಬೆಂಬಲಿಸುವವರು. ಅವರಿಗೆ ಬಿಡಿಗಾಸಿಗೆ ಜಮೀನು ಬಳುವಳಿ ನೀಡುವುದಕ್ಕೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಮಸೂದೆ ಮಂಡಿಸಿ, ಅಂಗೀಕಾರ ಪಡೆದಿದೆ ಎಂದು ದೂರಿದರು.

ADVERTISEMENT

ವಿಶ್ವವಿದ್ಯಾಲಯ ಆರಂಭಿಸಲು ಬೇಕಾದ ಯಾವ ಅರ್ಹತೆಗಳೂ ಸೆಸ್‌ ಸಂಸ್ಥೆಗೆ ಇಲ್ಲ. ಮೂಲಸೌಕರ್ಯವನ್ನೂ ಹೊಂದಿಲ್ಲ. ಯಾವ ಅರ್ಹತೆಯ ಮೇಲೆ ವಿಶ್ವವಿದ್ಯಾಲಯ ಆರಂಭಕ್ಕೆ ಅನುಮತಿ ನೀಡಲಾಗುತ್ತಿದೆ ಮತ್ತು ಜಮೀನು ಮಂಜೂರು ಮಾಡಲಾಗುತ್ತಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

‘ಕೋವಿಡ್‌ ಎರಡನೆ ಅಲೆ ಇದ್ದಾಗ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಆಗಿನ ಸರ್ಕಾರ, ತರಾತುರಿಯಲ್ಲಿ ಸಂಪುಟ ಸಭೆ ನಡೆಸಿ ಸೆಸ್‌ಗೆ ಜಮೀನು ಮಂಜೂರು ಮಾಡಿದೆ. ಇದು ದೊಡ್ಡ ಹಗರಣ. ಯಾವುದೇ ಅರ್ಹತೆ ಇಲ್ಲದ ಸಂಸ್ಥೆಗೆ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡಲಾಗುತ್ತಿದೆ. ಇದು ದೊಡ್ಡ ಅಪರಾಧ. ರಾಜ್ಯ ಸರ್ಕಾರ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡಬಾರದು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.