ADVERTISEMENT

ಉದ್ಯಮಿ ಸೇರಿ ಹಲವರ ವಿರುದ್ಧ ಸಿಬಿಐ ಎಫ್‌ಐಆರ್‌

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ ಗೆ ₹ 5.07 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 20:35 IST
Last Updated 30 ಜುಲೈ 2021, 20:35 IST

ಬೆಂಗಳೂರು: ಸ್ಥಿರಾಸ್ತಿ ಖಾತೆ, ಅಭಿವೃದ್ಧಿ ಶುಲ್ಕ ಪಾವತಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ ಆಫ್‌ ಇಂಡಿಯಾದ ಬೆಂಗಳೂರು ಮುಖ್ಯ ಶಾಖೆಯಿಂದ ಸಾಲ ಪಡೆದು ₹ 5.07 ಕೋಟಿ ವಂಚಿಸಿದ ಆರೋಪದ ಮೇಲೆ ಹೊಸಪೇಟೆಯ ಅಕ್ಷತಾ ಮಿನರಲ್ಸ್‌ ಪ್ರೈವೇಟ್‌ ಲಮಿಟೆಡ್‌ ಅಧ್ಯಕ್ಷ ಸೂಗೂರು ಗುರುನಾಥ್‌ ಮಂಜುನಾಥ್ ಭಟ್‌ ಸೇರಿದಂತೆ ಹಲವರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಅದಿರು ರಫ್ತು ವಹಿವಾಟು ನಡೆಸುತ್ತಿರುವುದಾಗಿ ದಾಖಲೆ ಸಲ್ಲಿಸಿದ್ದ ಮಂಜುನಾಥ‌ ಭಟ್‌ ಹಾಗೂ ಕಂಪನಿಯ ಮತ್ತೊಬ್ಬ ನಿರ್ದೇಶಕ ಆನೆಗುಂದಿ ನಾರಾಯಣಸ್ವಾಮಿ ಶ್ರೀನಿವಾಸ್‌, ₹ 6 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ಜೆ.ಸಿ. ನಗರ ಎಂ.ಆರ್‌. ಪಾಳ್ಯ ನಿವಾಸಿ ಲಕ್ಷ್ಮಮ್ಮ ಎಂಬುವವರ ಹೆಸರಿನ ಸ್ಥಿರಾಸ್ತಿ ದಾಖಲೆಗಳನ್ನು ಆಧಾರವಾಗಿ ನೀಡಿದ್ದರು. 2009 ಮತ್ತು 2010ರಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾದಿಂದ ₹ 6.14 ಕೋಟಿ ಸಾಲ ಮಂಜೂರು ಮಾಡಲಾಗಿತ್ತು ಎಂಬ ಅಂಶ ಎಫ್‌ಐಆರ್‌ನಲ್ಲಿದೆ.

‘2011ರ ಮಾರ್ಚ್‌ನಿಂದಲೂ ಅಕ್ಷತಾ ಮಿನರಲ್ಸ್‌ ಸಾಲದ ಖಾತೆ ಅನುತ್ಪಾದಕ ಆಸ್ತಿ (ಎನ್‌ಪಿಎ) ಸ್ಥಿತಿಯಲ್ಲಿದೆ. ಸದ್ಯ ₹ 5.07 ಕೋಟಿ ಬಾಕಿ ಇದೆ. ಭದ್ರತೆಯಾಗಿ ನೀಡಿದ್ದ ಸ್ಥಿರಾಸ್ತಿ ಹರಾಜಿಗೆ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ಲಕ್ಷ್ಮಮ್ಮ ಹೆಸರಿನಲ್ಲಿ ಬಿಬಿಎಂಪಿಯಲ್ಲಿ ಯಾವುದೇ ಆಸ್ತಿಯ ಖಾತೆ ಇಲ್ಲ. ಆಸ್ತಿಯ ಖಾತಾ, ಸ್ಥಿರಾಸ್ತಿ ಗುರುತಿನ ಸಂಖ್ಯೆ, ಅಭಿವೃದ್ಧಿ ಶುಲ್ಕ ಮತ್ತು ತೆರಿಗೆ ಪಾವತಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ಸಲ್ಲಿಸಿ ವಂಚಿಸಿರುವುದು ಕಂಡುಬಂದಿದೆ. ಇದರಿಂದಾಗಿ ಆಸ್ತಿಯನ್ನು ಹರಾಜಿನ ಮೂಲಕ ಮಾರಾಟ ಮಾಡುವುದು ಸಾಧ್ಯವಾಗಿಲ್ಲ’ ಎಂದು ಬ್ಯಾಂಕ್‌ ಆಫ್‌ ಇಂಡಿಯಾದ ಉಪ ವಲಯ ವ್ಯವಸ್ಥಾಪಕ ಬಾಲಸುಬ್ರಮಣಿಯನ್‌ ಜಗನ್ನಾಥ್‌ ಜುಲೈ 23ರಂದು ಸಿಬಿಐಗೆ ದೂರು ನೀಡಿದ್ದರು.

ADVERTISEMENT

ಸಿಬಿಐ ಬೆಂಗಳೂರು ಘಟಕವು ಜುಲೈ 27ರಂದು ಸೂಗೂರು ಗುರುನಾಥ್‌ ಮಂಜುನಾಥ್ ಭಟ್‌, ಆನೆಗುಂದಿ ನಾರಾಯಣಸ್ವಾಮಿ ಶ್ರೀನಿವಾಸ್‌, ಲಕ್ಷ್ಮಮ್ಮ ಅವರ ಮಗ ರಾಮಮೂರ್ತಿ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಸಿಬಿಐ ಎಸ್‌ಪಿ ಥಾಮ್ಸನ್‌ ಜೋಸ್‌ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ತಮ್ಮಯ್ಯ ರಾಜಶೇಖರ ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.