ADVERTISEMENT

ಮಕ್ಕಳ ಬಜೆಟ್‌: ಸ್ಥಳೀಯ ಸಂಸ್ಥೆಗಳಿಗೆ ಸಲಹೆ

ಕೋವಿಡ್‌–19: ಮಕ್ಕಳ ಮೇಲೆ ಪರಿಣಾಮಗಳು ಕುರಿತು ಸಮಾಲೋಚನಾ ಸಭೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 19:39 IST
Last Updated 8 ನವೆಂಬರ್ 2021, 19:39 IST
ನಗರದಲ್ಲಿ ಸೋಮವಾರ ಮಕ್ಕಳ ಹಕ್ಕುಗಳ ಧ್ವಜವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಆಂತೋಣಿ ಸೆಬಾಸ್ಟಿಯನ್‌ ಅನಾವರಣಗೊಳಿಸಿದರು. ತಮಿಳುನಾಡು ಎಸ್‌ಸಿಪಿಸಿಆರ್‌ ಅಧ್ಯಕ್ಷೆ ಸರಸ್ವತಿ ರಂಗಸ್ವಾಮಿ, ಆರಾಧ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ಇದ್ದರು. –ಪ್ರಜಾವಾಣಿ ಚಿತ್ರ
ನಗರದಲ್ಲಿ ಸೋಮವಾರ ಮಕ್ಕಳ ಹಕ್ಕುಗಳ ಧ್ವಜವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಆಂತೋಣಿ ಸೆಬಾಸ್ಟಿಯನ್‌ ಅನಾವರಣಗೊಳಿಸಿದರು. ತಮಿಳುನಾಡು ಎಸ್‌ಸಿಪಿಸಿಆರ್‌ ಅಧ್ಯಕ್ಷೆ ಸರಸ್ವತಿ ರಂಗಸ್ವಾಮಿ, ಆರಾಧ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ’ಸ್ಥಳೀಯ ಸಂಸ್ಥೆಗಳು ಬಜೆಟ್‌ ರೂಪಿಸುವಾಗ ಮಕ್ಕಳ ವಿಷಯಗಳಿಗೂ ಆದ್ಯತೆ ನೀಡಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ಸಲಹೆ ನೀಡಿದರು.

ಯುನಿಸೆಫ್‌ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಗರದಲ್ಲಿ ‘ಕೋವಿಡ್‌–19: ಮಕ್ಕಳ ಮೇಲೆ ಪರಿಣಾಮಗಳು’ ಕುರಿತು ಸೋಮವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯ ಮಟ್ಟದಲ್ಲಿ ಮಕ್ಕಳ ಬಜೆಟ್‌ ಕಲ್ಪನೆಯನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಅದೇ ರೀತಿ ಮಕ್ಕಳ ಬಜೆಟ್‌ ಕಲ್ಪನೆಯನ್ನು ಸ್ಥಳೀಯ ಸಂಸ್ಥೆಗಳು ರೂಪಿಸಿಕೊಳ್ಳಬೇಕು. ಈ ಮೂಲಕ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಪ್ರಾತಿನಿಧ್ಯ ನೀಡಬೇಕಾಗಿದೆ’ ಎಂದು ಸಲಹೆ ನೀಡಿದರು.

ADVERTISEMENT

‘ಮಕ್ಕಳ ಮೇಲೆ ಕೋವಿಡ್‌ ಅಪಾರ ಪರಿಣಾಮ ಬೀರಿದೆ. ಕೆಲವೆಡೆ ಬಾಲ್ಯ ವಿವಾಹವಾದ ವರದಿಗಳಾಗಿವೆ. ಅಂಗನವಾಡಿ ಕೇಂದ್ರಗಳು, ಶಾಲೆಗಳು ಮುಚ್ಚಿದ್ದರಿಂದ ಬೇರೆ, ಬೇರೆ ರೀತಿಯ ಪರಿಣಾಮಗಳಾಗಿವೆ. ರಾಜ್ಯದಲ್ಲಿ 66,361 ಅಂಗನವಾಡಿ ಕೇಂದ್ರಗಳಿವೆ. ಸದ್ಯ ಎರಡು ಗಂಟೆಗಳ ಕಾಲ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ವಿಶ್ಲೇಷಿಸಿ ಅವಧಿಯನ್ನು ವಿಸ್ತರಿಸಲಾಗುವುದು’ ಎಂದು ತಿಳಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ 5,600 ಗ್ರಂಥಾಲಯಗಳಿವೆ. 10 ಲಕ್ಷ ಮಕ್ಕಳು ಈ ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಂಡಿದ್ದಾರೆ. ಹಂತ ಹಂತವಾಗಿ ಈ ಗ್ರಂಥಾಲಯಗಳನ್ನು ಡಿಜಿಟಲ್‌ಗೆ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ 600 ಗ್ರಂಥಾಲಯಗಳನ್ನು ಡಿಜಿಟಲ್‌ಗೆ ಪರಿವರ್ತಿಸಲಾಗಿದೆ’ ಎಂದು ವಿವರಿಸಿದರು.

ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ವಿ.ಮುನಿರಾಜು, ‘2011ರ ಜನಗಣತಿ ಅನ್ವಯ ರಾಜ್ಯದಲ್ಲಿ 13.24 ಲಕ್ಷ ಅಂಗವಿಕಲರಿದ್ದಾರೆ. ಇವರಲ್ಲಿ 3.3 ಲಕ್ಷ ಮಕ್ಕಳಿದ್ದಾರೆ. ಈ ಮಕ್ಕಳ ಮೇಲೆ ಕೋವಿಡ್‌ ಗಂಭೀರ ಪರಿಣಾಮ ಬೀರಿದೆ. ಕೋವಿಡ್‌ನಿಂದ ಹಲವು ಪೋಷಕರು ಉದ್ಯೋಗ ಕಳೆದುಕೊಂಡಿದ್ದರಿಂದ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಲು ಸಾಧ್ಯವಾಗಿಲ್ಲ’ ಎಂದು ವಿವರಿಸಿದರು.

ಚೈಲ್ಡ್‌ ಫಂಡ್‌ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಲಂ ಮಾಖಿಜಾನಿ ಮಾತನಾಡಿ, ‘ಮಕ್ಕಳ ಅಭಿವೃದ್ಧಿ ವಿಷಯದಲ್ಲಿ ಪರಿಸ್ಥಿತಿ ಬದಲಾಗುತ್ತಿಲ್ಲ. ನಿಧಾನಗತಿಯಲ್ಲಿ ಪ್ರಗತಿ ಸಾಧಿಸ
ಲಾಗುತ್ತಿದೆ. ಮನಸ್ಥಿತಿಯನ್ನು ಬದಲಾಯಿಸಿಕೊಂಡು ಯೋಜನೆಗಳನ್ನು ರೂಪಿಸಬೇಕಾಗಿದೆ’ ಎಂದು ಹೇಳಿದರು.

‘ಶಾಲೆಗಳಲ್ಲಿ ಧಾರ್ಮಿಕ ವಿಷಯ ಬೋಧನೆ ಬೇಡ’

‘ಶಾಲೆಗಳಲ್ಲಿ ಧಾರ್ಮಿಕ ವಿಷಯಗಳ ಬೋಧನೆಯಿಂದ ತಾರತಮ್ಯಕ್ಕೆ ಕಾರಣವಾಗುತ್ತಿದೆ. ಹೀಗಾಗಿ, ಇಂತಹ ವಿಷಯಗಳ ಬೋಧನೆಗೆ ಕಡಿವಾಣ ಹಾಕಬೇಕಾಗಿದೆ’ ಎಂದು ‘ಆಪ್ಸಾ’ ಸಂಸ್ಥೆ ಪ್ರತಿನಿಧಿಸುವ ವಿದ್ಯಾರ್ಥಿನಿ ಆರಾಧ್ಯಾ ಪ್ರತಿಪಾದಿಸಿದರು.

‘ವಿದ್ಯಾರ್ಥಿಗಳನ್ನು ಯಾವುದೇ ಧರ್ಮದಿಂದ ಗುರುತಿಸುವುದು ಸಲ್ಲದು. ಧಾರ್ಮಿಕ ವಿಷಯಗಳ ಬದಲು ವೈಜ್ಞಾನಿಕ ಚಿಂತನೆ ಮೂಡಿಸುವ ವಿಷಯಗಳನ್ನೇ ಹೆಚ್ಚು ಬೋಧಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರನ್ನು ಚುಡಾಯಿಸುವುದು ಕಡಿಮೆಯಾಗಿಲ್ಲ. ಕೆಲವು ವಿದ್ಯಾರ್ಥಿನಿಯರು ಮನೆಯಲ್ಲೂ ಈ ವಿಷಯ ಹೇಳುತ್ತಿಲ್ಲ. ಇಂತಹ ಪ್ರಕರಣಗಳು ಎಲ್ಲೆಡೆ ನಡೆಯುತ್ತಿವೆ’ ಎಂದು ಹೇಳಿದರು.

‘ಕೋವಿಡ್‌ ಸಮಯದಲ್ಲಿ ಹಲವು ಮಕ್ಕಳು ಶಾಲೆಯನ್ನು ತೊರೆದಿದ್ದಾರೆ. ನನ್ನ ಸ್ನೇಹಿತರು ಸಹ ಇವರಲ್ಲಿದ್ದಾರೆ. ಇವರನ್ನು ಮತ್ತೆ ಶಾಲೆಗೆ ಕರೆತರುವ ಕಾರ್ಯವಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.