ADVERTISEMENT

ಮಕ್ಕಳ ದಿನಾಚರಣೆಯಂದೇ ಮಕ್ಕಳಿಗೆ ಶಿಕ್ಷೆ

ಚಿತ್ರ ವೀಕ್ಷಣೆಗಾಗಿ 3–4 ಕಿ.ಮೀ ನಡೆದ ಪುಟಾಣಿಗಳು, ಗೂಡ್ಸ್‌ ಆಟೊದಲ್ಲಿ ತುಂಬಿದರು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 16:15 IST
Last Updated 14 ನವೆಂಬರ್ 2018, 16:15 IST
ಯಳಂದೂರು ಪಟ್ಟಣಕ್ಕೆ ಶಾಲಾ ಮಕ್ಕಳನ್ನು ಗೂಡ್ಸ್ ಆಟೊದಲ್ಲಿ ಕರೆತಂದಿರುವುದು
ಯಳಂದೂರು ಪಟ್ಟಣಕ್ಕೆ ಶಾಲಾ ಮಕ್ಕಳನ್ನು ಗೂಡ್ಸ್ ಆಟೊದಲ್ಲಿ ಕರೆತಂದಿರುವುದು   

ಯಳಂದೂರು: ಮಕ್ಕಳ ದಿನವಾದ ಬುಧವಾರ ಮಕ್ಕಳಿಗೆ ಚಲನಚಿತ್ರ ತೋರಿಸುವುದಕ್ಕಾಗಿ ಶಿಕ್ಷಕರು ವಿವಿಧ ಗ್ರಾಮಗಳಿಂದ ನೂರಾರು ಮಕ್ಕಳನ್ನು 3ರಿಂದ 4 ಕಿ.ಮೀ. ದೂರದವರೆಗೆ ನಡೆಸಿಕೊಂಡು ಹಾಗೂ ಗೂಡ್ಸ್‌ ಆಟೊಗಳಲ್ಲಿ ತುಂಬಿಕೊಂಡು ಬಂದಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ‘ಶ್ರೀ ಮಹದೇಶ್ವರ’ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದ ‘ಎಳೆಯರು ನಾವು ಗೆಳೆಯರು’ ಚಿತ್ರದ ವೀಕ್ಷಣೆಗಾಗಿತಾಲ್ಲೂಕು ಶೈಕ್ಷಣಿಕ ಬ್ಲಾಕ್‌ನ ಗುಂಬಳ್ಳಿ ಕ್ಲಸ್ಟರ್ ಹಾಗೂ ಯಳಂದೂರು ಕ್ಲಸ್ಟರ್‌ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳನ್ನು ಕರೆದುಕೊಂಡು ಬರಲಾಗಿತ್ತು.

‌ಗೂಡ್ಸ್ ಆಟೊಗಳಲ್ಲಿ ತುಂಬಿದರು: ತಾಲ್ಲೂಕಿನ ಅಂಬಳೆ, ಗುಂಬಳ್ಳಿ, ಕಂದಹಳ್ಳಿ, ವೈ.ಕೆ.ಮೋಳೆ, ಉಪ್ಪಿನಮೋಳೆ, ಬಿಳಿಗಿರಿರಂಗನಬೆಟ್ಟ ಹಾಗೂ ಪಟ್ಟಣದ ಕೆಲವು ಶಾಲೆಗಳ ಮಕ್ಕಳು ಚಲನಚಿತ್ರ ವೀಕ್ಷಿಸಲು ಬಂದಿದ್ದರು. ಆದರೆ, ಕೆಲವು ಶಾಲೆಗಳ ಮಕ್ಕಳನ್ನು ಗೂಡ್ಸ್ ಆಟೊಗಳಲ್ಲಿ ಕುರಿಗಳಂತೆ ತುಂಬಿಕೊಂಡು ಕರೆ ತರಲಾಗಿತ್ತು. ಇದರಿಂದ ಕೋಪಗೊಂಡ ಕೆಲ ಸಾರ್ವಜನಿಕರು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ADVERTISEMENT

‘ಮಕ್ಕಳನ್ನು ಶಿಕ್ಷಕರು ನಡೆಸಿಕೊಂಡಿರುವ ರೀತಿ ಬೇಸರ ಮೂಡಿಸಿದೆ. ಟಾಟಾ ಏಸ್, ಆಪೆ ಆಟೊಗಳಲ್ಲಿ ತುಂಬಿಕೊಂಡು ಬೆಳಿಗ್ಗೆ 7.30ಕ್ಕೆ ಕರೆತರಲಾಗಿದೆ. ಕಂದಹಳ್ಳಿ, ವೈ.ಕೆ.ಮೋಳೆ ಸೇರಿದಂತೆ ಕೆಲವು ಶಾಲೆಗಳ ಮಕ್ಕಳನ್ನು ಕಿ.ಮೀ.ಗಟ್ಟಲೆನಡೆಸಿಕೊಂಡು ಬಂದು, ಮತ್ತೆ ವಾಪಸ್ಸು ಕರೆದೊಯ್ಯಲಾಗಿದೆ. ಈ ಬಗ್ಗೆ ಅಧಿಕಾರಿಗಳು ಅಸಡ್ಡೆ ವಹಿಸಿದ್ದಾರೆ’ ಎಂದುಪಟ್ಟಣ ಪಂಚಾಯಿತಿ ಸದಸ್ಯ ಜೆ.ಶ್ರೀನಿವಾಸ್, ಮುಖಂಡರಾದ ಲಿಂಗರಾಜಮೂರ್ತಿ ಆರೋಪಿಸಿದರು.

‘ತಪ್ಪಿತಸ್ಥರ ವಿರುದ್ಧ ಕ್ರಮ’

‘ಕೆಲವು ಗ್ರಾಮಗಳಿಂದ ಮಕ್ಕಳನ್ನು ಕರೆತರಲು ಬಸ್ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ಮಕ್ಕಳನ್ನು ಗೂಡ್ಸ್ ಆಟೊಗಳಲ್ಲಿ ಕರೆತರಲಾಗಿದೆ. ಇದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ವಹಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ. ತಿರುಮಲಾಚಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.