ADVERTISEMENT

ಕಲಾವಿದರ ಕೈ ಹಿಡಿದ ಚಿತ್ರಸಂತೆ

ಕಲಾವಿದರಿಂದ ನೇರವಾಗಿ ಕಲಾಕೃತಿಗಳ ಮಾರಾಟ

ವರುಣ ಹೆಗಡೆ
Published 2 ಫೆಬ್ರುವರಿ 2021, 20:14 IST
Last Updated 2 ಫೆಬ್ರುವರಿ 2021, 20:14 IST
A man looks at an art work at the at the inauguration of the 18th Chitra Sante which is virtual this edition in Bengaluru on Sunday, Jan 03, 2021. DH Photo/Pushkar V
A man looks at an art work at the at the inauguration of the 18th Chitra Sante which is virtual this edition in Bengaluru on Sunday, Jan 03, 2021. DH Photo/Pushkar V   

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿದ 18ನೇ ಚಿತ್ರಸಂತೆಯು ಕೋವಿಡ್‌ ಕಾಲಘಟ್ಟದಲ್ಲಿ ಕಲಾವಿದರ ಕೈ ಹಿಡಿದಿದ್ದು, ಆನ್‌ಲೈನ್ ವೇದಿಕೆಯಲ್ಲಿ 11.39 ಲಕ್ಷ ಮಂದಿ ಕಲಾಕೃತಿಗಳನ್ನು ವೀಕ್ಷಿಸಿದ್ದಾರೆ.

ನೇರವಾಗಿ ಕಲಾವಿದರನ್ನು ಸಂಪರ್ಕಿಸಿ, ಕಲಾಕೃತಿಗಳನ್ನು ಖರೀದಿಸುವ ಅಕಾಶವನ್ನು ಪರಿಷತ್ತು ಒದಗಿಸಿಕೊಟ್ಟಿತ್ತು. ಇದರಿಂದಾಗಿ ಡಿಜಿಟಲ್ ವಹಿವಾಟಿನ ಮೂಲಕವೇ ಕಲಾಸಕ್ತರು ಹಣ ಪಾವತಿಸಿ, ಕಲಾಕೃತಿಗಳನ್ನು ಖರೀದಿಸಿದ್ದಾರೆ. ₹200ನಿಂದ ₹ 8 ಲಕ್ಷದವರೆಗಿನ ಕಲಾಕೃತಿಗಳು ಕೂಡ ಮಾರಾಟವಾಗಿವೆ. ಪರಿಣಾಮ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಲಾವಿದರು ನಿಟ್ಟುಸಿರು ಬಿಟ್ಟಿದ್ದಾರೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್‌, ಜರ್ಮನಿ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ 70ಕ್ಕೂ ಅಧಿಕ ದೇಶಗಳಿಂದ ಜನತೆ ಆನ್‌ಲೈನ್‌ ಮೂಲಕ ಚಿತ್ರಸಂತೆಯನ್ನು ಕಣ್ತುಂಬಿಕೊಂಡಿದ್ದಾರೆ.

ಕೋವಿಡ್‌ ಕಾರಣ ಚಿತ್ರಕಲಾ ಪರಿಷತ್ತು ಈ ಬಾರಿ ಚಿತ್ರಸಂತೆಯನ್ನು ಆನ್‌ಲೈನ್‌ ಮೂಲಕ ಆಯೋಜಿಸಿತ್ತು. ಒಂದು ದಿನ ನಡೆಯುತ್ತಿದ್ದ ಚಿತ್ರಸಂತೆಯು ಈ ಬಾರಿ ಒಂದು ತಿಂಗಳು ನಡೆದಿದೆ. ಪರಿಷತ್ತಿನ ವೆಬ್‌ ಪೋರ್ಟಲ್‌ ಜತೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ನಲ್ಲಿ ಕೂಡ ಕಲಾಕೃತಿಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಪರಿಷತ್ತಿನ 5 ಗ್ಯಾಲರಿಗಳ ಜತೆಗೆ ಕಲಾ ವಿಶ್ವವಿದ್ಯಾಲಯದ 10 ತರಗತಿ ಕೊಠಡಿಗಳನ್ನು ಕೂಡ ಗ್ಯಾಲರಿಗಳಾಗಿ ಪರಿವರ್ತಿಸಿ, ಅಲ್ಲಿಯೂ ಭಾರತದ ಆಯ್ದ ಮತ್ತು ಆಹ್ವಾನಿತ ಪ್ರಸಿದ್ಧ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.

ADVERTISEMENT

2.51 ನಿಮಿಷ ವೀಕ್ಷಣೆ: ಈ ಬಾರಿಯ ಚಿತ್ರಸಂತೆಯಲ್ಲಿ 1,500 ಕಲಾವಿದರು ಭಾಗವಹಿಸಿದ್ದರು. ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಒಂದು ಆನ್‍ಲೈನ್ ಪುಟ ಮೀಸಲಿರಿಸಲಾಗಿತ್ತು. ಪ್ರತಿ ಕಲಾವಿದನೂ ತಮಗೆ ಮೀಸಲಿರಿಸಿದ ಪುಟದಲ್ಲಿ 10 ಕಲಾಕೃತಿಗಳನ್ನು ಪ್ರದರ್ಶಿಸಿ
ದ್ದರು. ಕಲಾವಿದರ ವಿವರ ನೀಡಿದ ಕಾರಣ ನೇರವಾಗಿ ಚಿತ್ರಪ್ರೇಮಿಗಳು ಸಂಪರ್ಕಿಸಲು ವೇದಿಕೆ ಸೃಷ್ಟಿಸಲಾಗಿತ್ತು. ಆನ್‌ಲೈನ್‌ ವೇದಿಕೆಗೆ ಭೇಟಿ ನೀಡಿದವರು ಪ್ರತಿ ಪುಟವನ್ನು ಸರಾಸರಿ 2.51 ನಿಮಿಷ ವೀಕ್ಷಿಸಿದ್ದಾರೆ. ಮತ್ತೊಮ್ಮೆ ಭೇಟಿ ನೀಡಿದವರು ಸರಾಸರಿ 7.49 ನಿಮಿಷಗಳು ಕಣ್ತುಂಬಿಕೊಂಡಿದ್ದಾರೆ.

‘ಕೋವಿಡ್‌ನಿಂದಾಗಿ ಕಲಾವಿದರು ಕಂಗಾಲಾಗಿದ್ದರು. ಅವರಿಗೆ ಈ ಚಿತ್ರಸಂತೆ ಹೊಸ ಭರವಸೆ ನೀಡಿದೆ. ನಮ್ಮ ನಿರೀಕ್ಷೆಗೂ ಮೀರಿ ಕಲಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲಾವಿದರಿಂದನೇರವಾಗಿ ಕಲಾಕೃತಿಗಳನ್ನು ಖರೀದಿಸುವ ವ್ಯವಸ್ಥೆ ಮಾಡಿದ್ದ ಕಾರಣ ಎಷ್ಟು ಕಲಾಕೃತಿಗಳು ಮಾರಾಟವಾಗಿವೆ ಎನ್ನುವ ಲೆಕ್ಕ ದೊರೆಯಲಿಲ್ಲ. ವಿದೇಶಿಗರು ಕೂಡ ಕಲಾಕೃತಿಗಳನ್ನು ವೀಕ್ಷಿಸಿ, ಖರೀದಿಸಿದ್ದಾರೆ’
ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಎಸ್. ಅಪ್ಪಾಜಯ್ಯ ತಿಳಿಸಿದರು.

ಪ್ರದರ್ಶನ ವಿಸ್ತರಣೆ

ಚಿತ್ರಸಂತೆಗೆ ಆನ್‌ಲೈನ್‌ನಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಕಲಾವಿದರು ಇನ್ನಷ್ಟು ದಿನ ಪ್ರದರ್ಶನವನ್ನು ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಪರಿಷತ್ತು ಮತ್ತೆ ಒಂದು ತಿಂಗಳು ಪ್ರದರ್ಶನವನ್ನು ವಿಸ್ತರಿಸಿದೆ.

‘ಇಲ್ಲಿನ ಕಲಾವಿದರ ಜತೆಗೆ ಪ್ರಥಮ ಬಾರಿಗೆ 22 ದೇಶಗಳ ಕಲಾವಿದರು ಆನ್‍ಲೈನ್ ಮೂಲಕ ಭಾಗವಹಿಸಿದ್ದರು. ಇದರಿಂದಾಗಿ ಕಲಾಕೃತಿಗಳನ್ನು ಕೊಳ್ಳುವವರಿಗೆ ಆಯ್ಕೆಗಳಿದ್ದವು. ಇಲ್ಲಿನ ಕಲಾಕೃತಿಗಳನ್ನು ವಿದೇಶಿಗರು ಹಾಗೂ ಅಲ್ಲಿನ ಕಲಾಕೃತಿಗಳನ್ನು ಇಲ್ಲಿಯವರು ಕಣ್ತುಂಬಿಕೊಂಡು, ಖರೀದಿಸಲು ಸಾಧ್ಯವಾಯಿತು’ ಎಂದು ಪ್ರೊ.ಕೆ.ಎಸ್. ಅಪ್ಪಾಜಯ್ಯ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.