ADVERTISEMENT

ಶಿವಮೂರ್ತಿ ಶರಣರಿಂದ ಲೈಂಗಿಕ ದೌರ್ಜನ್ಯ: ಆರೋಪ ಪಟ್ಟಿಯಲ್ಲಿ ಉಲ್ಲೇಖ

ಶಿವಮೂರ್ತಿ ಶರಣರಿಂದ ವಿದ್ಯಾರ್ಥಿನಿಯರಿಗೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 19:15 IST
Last Updated 13 ಫೆಬ್ರುವರಿ 2023, 19:15 IST
ಶಿವಮೂರ್ತಿ ಶರಣರು
ಶಿವಮೂರ್ತಿ ಶರಣರು   

ಚಿತ್ರದುರ್ಗ: ‘ಸರದಿ ಪ್ರಕಾರ ಸ್ವಾಮೀಜಿಯ ಖಾಸಗಿ ಕೊಠಡಿಗೆ ತೆರಳಿದಾಗ ಚಾಕೊಲೇಟ್‌ ನೀಡಲಾಗುತ್ತಿತ್ತು. ಅದನ್ನು ತಿಂದ ಬಳಿಕ ನಿದ್ದೆ ಬಂದಂತೆ ಆಗುತ್ತಿತ್ತು. ಎಚ್ಚರವಾದಾಗ ತುಂಬಾ ಸುಸ್ತು, ತೊಡೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಆ ಬಳಿಕ ಸರಿಯಾಗಿ ಪೀರಿಯಡ್‌ ಆಗುತ್ತಿರಲಿಲ್ಲ...’

ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ 14 ವರ್ಷದ ವಿದ್ಯಾರ್ಥಿನಿ ಪೊಲೀಸರ ಎದುರು ನೀಡಿದ ಹೇಳಿಕೆ ಇದು. ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ಈ ಬಗ್ಗೆ ವಿವರ ಇದೆ.

‘ಸ್ವಾಮೀಜಿಯ ತೊಡೆ ಮೇಲೆ ಕುಳಿತಿದ್ದಾಗ ಎದೆ, ಕುತ್ತಿಗೆ ಭಾಗವನ್ನು ಮುಟ್ಟುತ್ತಿದ್ದರು. ಆಗ ನನಗೆ ಭಯವಾಗುತ್ತಿತ್ತು. ಹಾಸ್ಟೆಲ್‌ ವಾರ್ಡನ್‌ ಸೂಚನೆಯಂತೆ ಪ್ರತಿ ಭಾನುವಾರ ಸ್ವಾಮೀಜಿಯ ಖಾಸಗಿ ಕೊಠಡಿಗೆ ತೆರಳಬೇಕಿತ್ತು. ಟೈಂ ಟೇಬಲ್ ಬದಲಾವಣೆ ಮಾಡಿದ್ದರಿಂದ ಪ್ರತಿ ಸೋಮವಾರ ಹೋಗುತ್ತಿದ್ದೆ. ಕೊಠಡಿಯಲ್ಲಿ ಮಲಗಿರುವಾಗ ಸ್ವಾಮೀಜಿ ನನ್ನನ್ನು ಬಳಸಿಕೊಂಡಿರಬಹುದು’ ಎಂದು ಸಂತ್ರಸ್ತ ವಿದ್ಯಾರ್ಥಿನಿ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾಳೆ.

ADVERTISEMENT

‘6ನೇ ತರಗತಿಯಲ್ಲಿದ್ದಾಗ ಸಹಪಾಠಿಯೊಂದಿಗೆ ಸ್ವಾಮೀಜಿಯ ಕೊಠಡಿಗೆ ಹಾಸ್ಟೆಲ್‌ ವಾರ್ಡನ್‌ ಕಳುಹಿಸಿಕೊಟ್ಟರು. ಕೊಠಡಿಯಲ್ಲಿದ್ದ ಟಿ.ವಿಯಲ್ಲಿ ದೃಷ್ಟಿ ಧಾರಾವಾಹಿ ನೋಡುತ್ತಾ ಕುಳಿತಿದ್ದಾಗ ಸ್ವಾಮೀಜಿ ಧಾವಿಸಿ ಅತ್ಯಾಚಾರ ಎಸಗಿದರು. ಆಗ ಮಠದ ದತ್ತು ಬಾಲಕಿಯೊಬ್ಬಳು ಅಲ್ಲಿಯೇ ಇದ್ದಳು’ ಎಂದು 12 ವರ್ಷದ ಮತ್ತೊಬ್ಬ ಸಂತ್ರಸ್ತ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾಳೆ. ಆದರೆ, ಸಹಪಾಠಿ ಈ ಹೇಳಿಕೆಯನ್ನು ಅಲ್ಲಗಳೆದಿರುವುದು ಕೂಡ ದೋಷಾರೋಪ
ಪಟ್ಟಿಯಲ್ಲಿದೆ.

‘ನಾನು ಮಠದಲ್ಲಿದ್ದಾಗ ಕೊಠಡಿಗೆ ಬೀಗ ಹಾಕುತ್ತಿರಲಿಲ್ಲ. ನಾನು ಇಲ್ಲದ ಸಮಯದಲ್ಲಿ ಯಾರಾದರೂ ಕೊಠಡಿಗೆ ಭೇಟಿ ನೀಡಿದ್ದ ಬಗ್ಗೆ ಮಾಹಿತಿ ಇಲ್ಲ. ದರ್ಬಾರ್‌ ಸಭಾಂಗಣದಲ್ಲಿ ಟ್ಯೂಷನ್‌ ಮಾಡಲಾಗುತ್ತಿತ್ತು. ಮಕ್ಕಳಿಗೆ ಪ್ರಸಾದವಾಗಿ ಹಣ್ಣು ನೀಡಲಾಗುತ್ತಿತ್ತು. ವಿದೇಶದಿಂದ ಮರಳಿದಾಗ ಮಕ್ಕಳಷ್ಟೇ ಅಲ್ಲ ಮಠದಲ್ಲಿರುವ ಎಲ್ಲರಿಗೂ ಚಾಕೊಲೇಟ್‌ ನೀಡುತ್ತಿದ್ದೆ’ ಎಂಬುದಾಗಿ ಶಿವಮೂರ್ತಿ ಶರಣರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರ ತಾಯಿಯೂ ಆಗಿರುವ ಮಠದ ಅಡುಗೆ ಸಹಾಯಕಿಯನ್ನು ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ
ಪಡೆದಿದ್ದಾರೆ. ಐಪಿಸಿ 376 (ಸಿ, 3, ಎಬಿ) 34, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ), ಬಾಲನ್ಯಾಯ ಕಾಯ್ದೆ–2015 ಹಾಗೂ ಧಾರ್ಮಿಕ ಸಂಸ್ಥೆಗಳ ದುರ್ಬಳಕೆ ತಡೆ ಕಾಯ್ದೆಯಡಿ ಪೊಲೀಸರು ದೋಷಾರೋಪಪಟ್ಟಿ
ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.