ADVERTISEMENT

ನಿಮ್ಹಾನ್ಸ್‌, ಎನ್‌ಸಿಬಿಎಸ್‌ನಲ್ಲೇ ವಂಶವಾಹಿ ಸಂರಚನೆ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 16:25 IST
Last Updated 1 ಡಿಸೆಂಬರ್ 2021, 16:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ದೃಢಪಟ್ಟ ಪ್ರಕರಣಗಳ ಮಾದರಿಗಳ ವಂಶವಾಹಿ ಸಂರಚನೆ ವಿಶ್ಲೇಷಣೆಯನ್ನು ಭಾರತೀಯ ಸಾರ್ಸ್‌ಕೋವ್‌–2 ಜೆನೋಮಿಕ್ಸ್‌ ಕನ್ಸೋರ್ಟಿಯಂ (ಇನ್ಸಾಕಾಗ್‌) ಮಾನ್ಯತೆ ಹೊಂದಿರುವ ನಿಮ್ಹಾನ್ಸ್‌ ಮತ್ತು ರಾಷ್ಟ್ರೀಯ ಜೀವ ವಿಜ್ಞಾನಗಳ ಸಂಸ್ಥೆಯ (ಎನ್‌ಸಿಬಿಎಸ್‌) ಪ್ರಯೋಗಾಲಯಗಳಲ್ಲೇ ನಡೆಸಬೇಕು ಎಂದು ಆರೋಗ್ಯ ಇಲಾಖೆಯ ಆಯುಕ್ತರು ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ.

ಕೊರೊನಾ ವೈರಾಣುವಿನ ವಂಶವಾಹಿ ಸಂರಚನೆ ವಿಶ್ಲೇಷಣೆಯನ್ನು ಇನ್ಸಾಕಾಗ್‌ ಪ್ರಮಾಣಿತವಲ್ಲದ ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸಲು ಅವಕಾಶವಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ, ನಿಮ್ಹಾನ್ಸ್‌ ಮತ್ತು ಎನ್‌ಸಿಬಿಎಸ್‌ ಪ್ರಯೋಗಾಲಯಗಳಿಗೆ ಮಾದರಿ ಕಳುಹಿಸಬೇಕು. ಮಾದರಿಗಳನ್ನು ಕಳುಹಿಸಲು ರಾಜ್ಯದ ವಿವಿಧೆಡೆ ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಪ್ರಮುಖ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಅವುಗಳ ಮೂಲಕವೇ ಮಾದರಿ ಕಳುಹಿಸಬೇಕು ಎಂದು ಸೂಚಿಸಲಾಗಿದೆ.

‘ರಾಜ್ಯದ ವಿವಿಧೆಡೆ ಕ್ಲಸ್ಟರ್‌ ಮಾದರಿಯಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ, ಕೆಲವು ಜಿಲ್ಲೆಗಳಿಂದ ವೈರಾಣುವಿನ ವಂಶವಾಹಿ ಸಂರಚನೆ ವಿಶ್ಲೇಷಣೆಗೆ ಮಾದರಿಗಳನ್ನು ಕಳುಹಿಸಿಲ್ಲ. ಇನ್ನು ಕೆಲವು ಜಿಲ್ಲೆಗಳಲ್ಲಿ ವಿಳಂವಾಗಿ ಕಳುಹಿಸಲಾಗುತ್ತಿದೆ. ತ್ವರಿತವಾಗಿ ಮಾದರಿ ರವಾನಿಸುವ ಕೆಲಸವನ್ನು ಆಯಾ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಮಾಡಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.