ADVERTISEMENT

ಸಿಎಂ ನನ್ನ ವಿರುದ್ಧ ದೂರು ನೀಡಿಲ್ಲ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 16:23 IST
Last Updated 19 ಜನವರಿ 2022, 16:23 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದುದು’ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

‘ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರ ಬಗ್ಗೆ ಅಸಮಾಧಾನವೂ ಇಲ್ಲ. ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ. ಮುವ್ವತ್ತು ವರ್ಷಗಳಿಂದ ಸಂಬಂಧವಿದೆ. ಅವರು ನನ್ನ ವಿರುದ್ಧ ವರಿಷ್ಠರಿಗೆ ದೂರು ನೀಡಲು ಸಾಧ್ಯವಿಲ್ಲ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೆಲವರು ಸುಖಾಸುಮ್ಮನೆ ಇಲ್ಲ ಸಲ್ಲದ ಗಾಳಿ ಸುದ್ದಿಯನ್ನು ಹಬ್ಬಿಸುತ್ತಾರೆ. ನನ್ನ ವಿರುದ್ಧ ವರಿಷ್ಠರಿಗೆ ದೂರು ನೀಡಲು ಸಾಧ್ಯವೇ ಇಲ್ಲ. ಕೇವಲ ರಾಜಕೀಯ ಮಾತ್ರವಲ್ಲ, ಬೇರೆ ಕಾರಣಗಳಿಂದ ನಾನು ತಪ್ಪು ಹೆಜ್ಜೆ ಇಟ್ಟಾಗಲೂ ಬೊಮ್ಮಾಯಿ ತಿಳಿ ಹೇಳುತ್ತಾ ಬಂದಿದ್ದಾರೆ. ಈಗಲೂ ಅಷ್ಟೇ, ಅವರ ಬಗ್ಗೆ ಯಾವುದೇ ನನಗೆ ಅಸಮಾಧಾನವಿಲ್ಲ. ಅದೇ ರೀತಿ ಅವರಿಗೂ ನನ್ನ ಮೇಲೆ ಅಸಮಾಧಾನವಿಲ್ಲ’ ಎಂದರು.

ADVERTISEMENT

‘ಬೊಮ್ಮಾಯಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲಿದ್ದು, 2023ರ ಬಳಿಕವೂ ಅವರೇ ಮುಖ್ಯಮಂತ್ರಿ ಆಗುತ್ತಾರೆ.ಬೊಮ್ಮಾಯಿ ಅವರು ಉತ್ತಮವಾಗಿ ಆಡಳಿತ ನೀಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ನಾನು ಪಕ್ಷದ ರಾಷ್ಟ್ರೀಯ ನಾಯಕರು, ಸಂಘಪರಿವಾರದ ನಾಯಕರು ಭೇಟಿಯೇ ಮಾಡಿಲ್ಲ. ಭೇಟಿ ಮಾಡಿದ್ದು ಸಾಬೀತು ಮಾಡಿದರೆ ನೀವು ಹೇಳಿದಂತೆ ಕೇಳುತ್ತೇನೆ. ನನ್ನ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದೇನೆ. ಬೇರೆಯವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ’ ಎಂದರು.

‘ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರ ಪರಮಾಧಿಕಾರ. ಸೂಕ್ತ ಸಂದರ್ಭದಲ್ಲಿ ಭರ್ತಿ ಮಾಡುತ್ತಾರೆ. ಸಚಿವರನ್ನು ಕೈ ಬಿಡುವ ವಿಚಾರವೂ ಮುಖ್ಯಮಂತ್ರಿಯವರ ಪರಮಾಧಿಕಾರ. ಅವರ ನಿರ್ಧಾರಕ್ಕೆ ಬಿಟ್ಟಿದ್ದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.