ADVERTISEMENT

ಚರ್ಮಗಂಟು ರೋಗ ನಿರ್ವಹಣೆಗೆ ₹13 ಕೋಟಿ ಬಿಡುಗಡೆ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 8:31 IST
Last Updated 14 ಅಕ್ಟೋಬರ್ 2022, 8:31 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯದಲ್ಲಿ ಹರಡುತ್ತಿರುವ ಜಾನುವಾರುಗಳ ಚರ್ಮಗಂಟು ರೋಗ ನಿವಾರಣೆಗೆ ಲಸಿಕೆ, ಚಿಕಿತ್ಸೆ ನೀಡಲು ಹಾಗೂ ಮೃತಪಟ್ಟ ರಾಸುಗಳಿಗೆ ಪರಿಹಾರ ಒದಗಿಸಲು ₹ 13 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮೃತ ರಾಸುಗಳ ಪರಿಹಾರಕ್ಕೆ ಈಗಾಗಲೇ ₹ 2 ಕೋಟಿ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ₹ 5 ಕೋಟಿ ಹಾಗೂ ಜಾನುವಾರುಗಳ ಚಿಕಿತ್ಸೆಗೆ ಮತ್ತು ಲಸಿಕೆಗೆ 8 ಕೋಟಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಿದರು.

ರಾಜ್ಯದ 28 ಜಿಲ್ಲೆಗಳ 160 ತಾಲ್ಲೂಕುಗಳ 4380 ಗ್ರಾಮಗಳಲ್ಲಿ ಕಾಣಿಸಿಕೊಂಡಿವೆ. 45,645 ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದು, 26,135 ಜಾನುವಾರುಗಳು ಗುಣಮುಖವಾಗಿವೆ. 2070 ಜಾನುವಾರುಗಳು ಮರಣ ಹೊಂದಿವೆ.

ADVERTISEMENT

15 ಲಕ್ಷ ಲಸಿಕೆ ಒದಗಿಸಲು ಸೂಚನೆ:6.57 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಯಂತೆ ರೋಗ ಕಾಣಿಸಿಕೊಂಡ 5 ಕಿ.ಮೀ. ಸುತ್ತಳತೆಯಲ್ಲಿ ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ಹಾಕಬೇಕು ಎಂದು ಅಧಿಕಾರಿಗಳು ತಿಳಿಸಿದರು. ಈ ಹಿನ್ನೆಲೆಯಲ್ಲಿ ರೋಗ ತೀವ್ರವಾಗಿರುವ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆಯನ್ನು ಹಾಕಲು ಸೂಚಿಸಿದರಲ್ಲದೆ, ಕೂಡಲೇ 15 ಲಕ್ಷ ಡೋಸ್ ಲಸಿಕೆಗಳನ್ನು ಒದಗಿಸುವಂತೆ ತಿಳಿಸಿದರು. ಲಸಿಕೆ ಪೂರೈಕೆ ಕುರಿತು ಭಾರತ ಸರ್ಕಾರ ಅನುಮೋದಿಸಿದ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿ, ಲಸಿಕೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿಗಳಿಗೆ ಸೂಚಿಸಿದರು.

ರೋಗಪೀಡಿತ ಜಾನುವಾರುಗಳನ್ನು ಪ್ರತ್ಯೇಕಿಸಲು ಪ್ರತಿ ಗ್ರಾಮದಲ್ಲಿ ವ್ಯವಸ್ಥೆ ಮಾಡಬೇಕು. ಮರಣ ಹೊಂದಿದ ಜಾನುವಾರುಗಳಿಗೆ ₹ 2 ಕೋಟಿ ನೀಡಲಾಗಿದ್ದು, 46.15 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಬಾಕಿ ಪರಿಹಾರ ತ್ವರಿತವಾಗಿ ವಿತರಿಸುವಂತೆ ಸೂಚಿಸಲಾಯಿತು.

ಮನುಷ್ಯರಿಗೆ ಹರಡುವುದಿಲ್ಲ:ರೋಗಪೀಡಿತ ರಾಸುಗಳ ಹಾಲಿನಿಂದ ಮನುಷ್ಯರಿಗೆ ರೋಗ ಹರಡುವುದಿಲ್ಲ. ಈ ಕುರಿತು ಜನರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.

ಚರ್ಮಗಂಟು ರೋಗ ತೀವ್ರವಾಗಿರುವ ಹಾವೇರಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ರೋಗನಿಯಂತ್ರಣಕ್ಕೆ ತೀವ್ರ ಕ್ರಮ ಕೈಗೊಳ್ಳಬೇಕು. ಇತರ ಜಿಲ್ಲೆಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಲಸಿಕೆ ಅಭಿಯಾನ ತೀವ್ರಗೊಳಿಸಲು ತಿಳಿಸಿದರು.

ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.