ADVERTISEMENT

ಮತಾಂತರ ನಿಷೇಧ: ಸಿಎಂ ಬಸವರಾಜ ಬೊಮ್ಮಾಯಿ ಸುಳಿವು

ಬಲವಂತ, ಆಮಿಷದ ಮತಾಂತರಕ್ಕೆ ತಡೆ: ಪ್ರಸಕ್ತ ಅಧಿವೇಶನದಲ್ಲಿಯೇ ಮಸೂದೆ?

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 21:45 IST
Last Updated 12 ಡಿಸೆಂಬರ್ 2021, 21:45 IST
ಬೊಮ್ಮಾಯಿ
ಬೊಮ್ಮಾಯಿ   

ಹುಬ್ಬಳ್ಳಿ: ‘ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದರೆ ಕ್ರೈಸ್ತರು ಆತಂಕ ಪಡುವ ಅಗತ್ಯವಿಲ್ಲ. ಅವರ ಧಾರ್ಮಿಕ ಆಚರಣೆಗೆ ಯಾವುದೇ ಕುತ್ತು ಬರುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಆ ಮೂಲಕ ಬೆಳಗಾವಿ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಮಸೂದೆ ಮಂಡನೆ ಮಾಡುವ ಸುಳಿವು ನೀಡಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಡತನ, ಮನೆಯ ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ಹಾಗೂಆಮಿಷ ಒಡ್ಡಿ ‌ಮತಾಂತರಕ್ಕೆ ಯತ್ನಿಸುವವರಿಗೆ ಕಡಿವಾಣ ಹಾಕಲು ಕಾಯ್ದೆ ಅನುಕೂಲವಾಗಲಿದೆ. ಸ್ವಾತಂತ್ರ್ಯಾನಂತರ ಈ ಬಗ್ಗೆ ಅನೇಕ ಬಾರಿ ಚರ್ಚೆಗಳಾಗಿವೆ. ಹಲವು ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು ಎಂಬುದು ಬಹಳಷ್ಟು ಜನರ ಒತ್ತಾಸೆಯಾಗಿದೆ’ ಎಂದರು.

’ಕಾಯ್ದೆ ಬಗ್ಗೆ ಕಾನೂನು ಇಲಾಖೆ ಕರಡು ಸಿದ್ಧಪಡಿಸುತ್ತಿದ್ದು, ಸೋಮವಾರ ಆರಂಭವಾಗಲಿರುವ ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆಯ ಕುರಿತು ಚರ್ಚೆಯಾಗಲಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌ ಹೀಗೆ ಎಲ್ಲವೂ ಸಂವಿಧಾನದಲ್ಲಿ ಗುರುತಿಸಲಾದ ಧರ್ಮಗಳಾಗಿವೆ. ಯಾರ ಪ್ರಾರ್ಥನೆ, ಆಚರಣೆ, ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರದ ಹಾಗೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಯಾವುದೇ ಮನೆಗೆ, ಮನಸ್ಸುಗಳಿಗೆ ಕೆಟ್ಟದಾಗಬಾರದು. ಬಡವರು, ದೀನದಲಿತರು ಇದಕ್ಕೆ ಬಲಿಯಾಗಬಾರದು ಎನ್ನುವ ಕಾರಣಕ್ಕೆ ಕಾನೂನು ಜಾರಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ’ ಎಂದರು.

ಬೆಳಗಾವಿ ಅಧಿವೇಶನದ ಬಗ್ಗೆ ಪ್ರತಿಕ್ರಿಯಿಸಿ ‘ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಪ್ರಮುಖ ವಿಷಯಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಬೇಕು ಎನ್ನುವ ಆಸೆ ನಮ್ಮದು. ಸಮಗ್ರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು’ ಎಂದರು.

ಅಂಗೀಕರಿಸಲಿ: ‘ಮತಾಂತರ ನಿಷೇಧ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿಯೇ ಮಂಡಿಸಿ, ಅಂಗೀಕರಿಸಬೇಕು’ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಅವರು, ‘ಜನರ ಬಡತನ, ಅಸಹಾಯಕತೆ ದುರುಪಯೋಗ ಪಡಿಸಿಕೊಂಡು ಮತಾಂತರ ಮಾಡಲು ಅವಕಾಶ ಕೊಡಬಾರದು.ಸರ್ಕಾರ ಕೂಡ ಸಮಾಜದ ಎಲ್ಲ ವರ್ಗಗಳ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು’ ಎಂದರು.

‘ಮನೆಯವರೇ ಮತಾಂತರವಾದರೆ ಸುಮ್ಮನಿರುತ್ತೀರಾ’: ‘ತಮ್ಮ ಮನೆಯ ಸದಸ್ಯರೇ ಮತಾಂತರ ಆದಲ್ಲಿ ಕಾಂಗ್ರೆಸ್‌ ನಾಯಕರು ಸುಮ್ಮನೆ ಕೂರುವರಾ’ ಎಂದು ಕೇಂದ್ರ ಸಬಲೀಕರಣ ಹಾಗೂ ಸಾಮಾಜಿಕ ನ್ಯಾಯ ಸಚಿವ ಎ. ನಾರಾಯಣಸ್ವಾಮಿ ಚಿತ್ರದುರ್ಗದಲ್ಲಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನೇ ಹೇಳಿದರೂ ಧರ್ಮ–ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುತ್ತಿರುವ ಮತಾಂತರಕ್ಕೆ ಬಿಜೆಪಿ ವಿರೋಧವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.