ADVERTISEMENT

ರಾಜ್ಯದ ಗಡಿ ಪ್ರದೇಶದ ಒಂದಿಂಚೂ ಜಾಗ ಬಿಟ್ಟುಕೊಡಲ್ಲ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 2 ಮೇ 2022, 19:21 IST
Last Updated 2 ಮೇ 2022, 19:21 IST
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ರಾಜ್ಯದ ಗಡಿ ಪ್ರದೇಶದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಗಡಿ ಬಗ್ಗೆ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಕರ್ನಾಟಕದ ಗಡಿ ಭಾಗಗಳ ಮರಾಠಿ ಭಾಷಿಗರು ಇರುವ ಸ್ಥಳಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಹೋರಾಟಕ್ಕೆ ನಮ್ಮ ಬೆಂಬಲ ಮುಂದುವರಿಯಲಿದೆ’ ಎಂಬ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಹೇಳಿಕೆಗೆ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಬೊಮ್ಮಾಯಿ, ‘ಮಹಾರಾಷ್ಟ್ರದಲ್ಲಿನ ರಾಜಕಾರಣಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅದಕ್ಕಾಗಿ ರಾಜ್ಯದ ಗಡಿ ಭಾಷೆಗಳ ಬಗ್ಗೆ ಕೆದಕುತ್ತಿದ್ದಾರೆ’ ಎಂದರು.

ADVERTISEMENT

‘ಮಹಾರಾಷ್ಟ್ರದವರು ಅವರ ರಾಜಕೀಯ ಉಳಿವಿಗಾಗಿ ರಾಜ್ಯದ ಗಡಿ ಭಾಷೆ ವಿಚಾರಗಳನ್ನು ಎತ್ತುವುದು ಸಣ್ಣತನ. ಮಹಾರಾಷ್ಟ್ರದ ಎಲ್ಲ ರಾಜಕಾರಣಿಗಳು ಈ ರೀತಿಯ ವರ್ತನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿದ ಮುಖ್ಯಮಂತ್ರಿ, ‘ಮಹಾರಾಷ್ಟ್ರದಲ್ಲಿ ಕನ್ನಡ ಭಾಷೆ ಮಾತನಾಡುವ ಜನರಿರುವ ಹಲವು ಪ್ರದೇಶಗಳಿವೆ. ಈ ಬಗ್ಗೆಯೂ ಕ್ರಮ ತೆಗೆದುಕೊಳ್ಳುವ ಚಿಂತನೆ ಸರ್ಕಾರ ಮಾಡುತ್ತಿದೆ’ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.