ADVERTISEMENT

ಶಾಂತವೇರಿ ಗೋಪಾಲಗೌಡ ಹೆಸರಲ್ಲಿ ಶ್ರೇಷ್ಠ ಕೃಷಿಕ, ಶಾಸಕ ಪ್ರಶಸ್ತಿ- ಸಿಎಂ ಬೊಮ್ಮಾಯಿ

ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 14:24 IST
Last Updated 14 ಮಾರ್ಚ್ 2022, 14:24 IST
ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಶಾಸಕ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನ ಮತ್ತು ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಆಯೋಜಿಸಿದ್ದ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗೋಪಾಲಗೌಡರ ಕುರಿತ ಕೃತಿಗಳನ್ನು ಮುದ್ರಿಸಿ, ನಾಡಿನಾದ್ಯಂತ ಎಲ್ಲ ಗ್ರಂಥಾಲಯಗಳಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಭೂಸುಧಾರಣೆಗಾಗಿ ನಡೆದಿರುವ ಹೋರಾಟದ ಬಗ್ಗೆ ಪುಸ್ತಕವನ್ನು ಸರ್ಕಾರದ ವತಿಯಿಂದ ಜನ್ಮ ದಿನೋತ್ಸವದ ಅಂಗವಾಗಿ ಹೊರತಂದು ಬಿಡುಗಡೆ ಮಾಡಲಾಗುವುದು ಎಂದೂ ಹೇಳಿದರು.

ADVERTISEMENT

ಸರ್ಕಾರದ ಆಡಳಿತ ಮತ್ತು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಅವರ ವಿಚಾರಧಾರೆಗಳು ಮಾರ್ಗದರ್ಶಕವಾಗಿವೆ. ಅವರು ಯಾವುದಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದಾರೋ, ತ್ಯಾಗ ಮಾಡಿದ್ದಾರೋ ಆ ಮೌಲ್ಯಗಳನ್ನು ಎತ್ತಿ ಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡೋಣ ಎಂದೂ ಸಲಹೆ ನೀಡಿದರು.

ಗೋಪಾಲಗೌಡರು ನಮ್ಮ ತಂದೆ ಎಸ್‌.ಆರ್‌.ಬೊಮ್ಮಾಯಿ ಅವರ ಸಮಕಾಲೀನರು. ಸಮಾನ ಮನಸ್ಕರು ಹಾಗೂ ಸಮ ಹೋರಾಟಗಾರರು ಆಗಿದ್ದರು. ತಮ್ಮದೇ ಆದ ವ್ಯಕಿತ್ವ ಹೊಂದಿ ದೀರ್ಘಕಾಲ ತಮ್ಮ ವೈಚಾರಿಕ ಕ್ರಾಂತಿಯಿಂದ ನಮ್ಮೆಲ್ಲರನ್ನು ಸೆಳೆದಿದ್ದ ಅವರು ಅಪರೂಪದ ವ್ಯಕ್ತಿ. ರಾಜಕಾರಣಕ್ಕೆ ವಿಶ್ವಾಸಾರ್ಹತೆ ಉಳಿದಿದ್ದರೆ ಇವರಂಥ ನಾಯಕರಿಂದ ಸಾಧ್ಯವಾಗಿದೆ. ಅವರು ಆದರ್ಶ ಬದುಕನ್ನು ಬದುಕಿದ್ದರು. ಇಂದಿನ ದಿನಗಳಲ್ಲಿ ರಾಜಕಾರಣಿಗಳ ಆಸ್ತಿಯನ್ನುನೋಡುತ್ತೇವೆ. ಆದರೆ,ಜನರಿಗೆ ಅಗತ್ಯವಿರುವ ವ್ಯವಸ್ಥೆ ಮತ್ತು ಅದಕ್ಕೆ ಪೂರಕವಾದ ವೈಚಾರಿಕತೆಯೇ ಗೋಪಾಲಗೌಡರ ಆಸ್ತಿ ಆಗಿತ್ತು. ಅವರ ವಿಚಾರ, ತತ್ವಾದರ್ಶಗಳು ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೆ ಶಾಂತವೇರಿ ಗೋಪಾಲಗೌಡರು ನಮ್ಮ ನಡುವೆ ಜೀವಂತವಾಗಿರುತ್ತಾರೆ ಎಂದು ಹೇಳಿದರು.

ರಾಜ್ಯ ರಾಜಕಾರಣ ಮಾತ್ರವಲ್ಲ, ರಾಜ್ಯದ ರೈತರ ಬದುಕಿನಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಸದನದ ಒಳಗೆ ಕರ್ನಾಟಕದ ವಿಧಾನಸಭೆಯ ನಡಾವಳಿಯಲ್ಲಿ ಅತ್ಯಂತ ಶ್ರೇಷ್ಠ ವಾಗ್ಮಿಗಳ ಪೈಕಿ ಶಾಂತವೇರಿ ಗೋಪಾಲಗೌಡರು ಅಚ್ಚಳಿಯದೆ ಉಳಿದಿದ್ದಾರೆ. ಅವರ ಇಡೀ ಬದುಕನ್ನು ಜನರಿಗಾಗಿ ಗಂಧದ ಕೊರಡಿನಂತೆ ತೇಯ್ದಿದ್ದಾರೆ. ತೀರ್ಥಹಳ್ಳಿ ಸ್ಫೂರ್ತಿದಾಯಕ ಪುಣ್ಯ ಭೂಮಿ. ಕುವೆಂಪು, ಕಡಿದಾಳ ಮಂಜಪ್ಪ, ಶಾಂತವೇರಿ ಗೋಪಾಲ ಗೌಡರು ಜನಿಸಿದ ನೆಲ. ಅತಿ ಶೀಘ್ರದಲ್ಲಿಯೇ ಅಲ್ಲಿಗೆ ಭೇಟಿ ನೀಡಿ ಪ್ರೇರಣೆ ಪಡೆಯುವ ಇಂಗಿತವಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.