ADVERTISEMENT

ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ– ಜೋಶಿ ಮಾತುಕತೆ

​ಪ್ರಜಾವಾಣಿ ವಾರ್ತೆ
Published 7 ಮೇ 2022, 19:30 IST
Last Updated 7 ಮೇ 2022, 19:30 IST
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೇವನಹಳ್ಳಿಸಯ ಕೆಂಷಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಅತಿಗಣ್ಯ ವ್ಯಕ್ತಿಗಳ ವಿಶ್ರಾಂತಿ ಕೊಠಡಿಯಲ್ಲಿ ಶನಿವಾರ ಬೆಳಿಗ್ಗೆ ಕೆಲಕಾಲಷ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನಗರದ ರವೀಂದ್ಷರ ಕಲಾಕ್ಷೇತ್ರದಲ್ಲಿ ನಡೆದ ಬಸವ ಜಯಂತಿ ಸಮಾರಂಭದಲ್ಲಿ ಇಬ್ಬರೂ ನಾಯಕರು ಪಾಲ್ಗೊಂಡಿದ್ದರು. ಅಲ್ಲಿಂದ ಪ್ರಲ್ಹಾದ ಜೋಶಿಯವರು ಕೆಐಎಗೆ ಹೋಗಿ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳುವವರಿದ್ದರು. ಅವರೊಂದಿಗೆ ಮುಖ್ಯಮಂತ್ರಿಯವರೂ ತಮ್ಮ ಕಾರಿನಲ್ಲಿ ಕೆಐಎಗೆ ಹೋಗಿದ್ದರು. ಕಂದಾಯ ಸಚಿವ ಆರ್‌. ಅಶೋಕ ಮತ್ತು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಜತೆಗಿದ್ದರು.

ಸಂಪುಟ ಪುನರ್‌ ರಚನೆ, ಸಂಪುಟ ವಿಸ್ತರಣೆ, ಸರ್ಕಾರದ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಪಕ್ಷದ ವರಿಷ್ಠರ ನಿಕಟವರ್ತಿಯಾಗಿರುವ ಕೇಂದ್ರ ಸಚಿವರ ಜತೆ ಮುಖ್ಯಮಂತ್ರಿ ರಹಸ್ಯ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತರಹೇವಾರಿ ಚರ್ಚೆಗಳಿಗೆ ಕಾರಣವಾಗಿದೆ.

ADVERTISEMENT

ಇಬ್ಬರೂ ನಾಯಕರು ಏನು ಚರ್ಚೆ ಮಾಡಿದ್ದಾರೆ? ಚರ್ಚೆ ಸಂದರ್ಭದಲ್ಲಿ ಅಶೋಕ ಮತ್ತು ಸವದಿ ಜತೆಗಿದ್ದರೆ? ಎಂಬುದು ಖಚಿತವಾಗಿಲ್ಲ. ಪಕ್ಷದ ವರಿಷ್ಠರು ರವಾನಿಸಿರುವ ಸಂದೇಶದ ಕುರಿತು ಸಮಾಲೋಚನೆ ನಡೆದಿರುವ ಸಾಧ್ಯತೆ ಇದೆ ಎಂಬ ಮಾತು ಬಿಜೆಪಿಯಲ್ಲಿ ಕೇಳಿಬರುತ್ತಿದೆ.

‘ಸಂಪುಟ ಅಥವಾ ನಾಯಕತ್ವಕ್ಕೆ ಸಂಬಂಧಿಸಿದ ಯಾವುದೇ ಚರ್ಚೆ ನಡೆಸಿಲ್ಲ’ ಎಂದು ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಜೋಶಿ ಅವರು ತುರ್ತಾಗಿ ವಿಮಾನ ನಿಲ್ದಾಣಕ್ಕೆ ತೆರಳಬೇಕಿತ್ತು. ಅವರಿಗೆ ತಡೆರಹಿತ ಸಂಚಾರದ ಸೌಲಭ್ಯವಿಲ್ಲ. ಹೀಗಾಗಿ ಮುಖ್ಯಮಂತ್ರಿಯೇ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳಿ, ಬಿಟ್ಟು ಬಂದಿದ್ದಾರೆ ಎಂದು ಮುಖ್ಯಮಂತ್ರಿಯವರ ಆಪ್ತರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.