ADVERTISEMENT

ಮನೆಗೆ ಬಂದ ಸೊಸೆ ಹಾಗೆ ಸಿದ್ದರಾಮಯ್ಯ: ಸಿ.ಎಂ. ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 21:15 IST
Last Updated 26 ಜೂನ್ 2021, 21:15 IST
ಇಬ್ರಾಹಿಂ
ಇಬ್ರಾಹಿಂ   

ಬೆಂಗಳೂರು: ‘ಮನೆಗೆ ಬರುವಾಗ ಸೊಸೆ ಹೊಸದಾಗಿಯೇ ಬರುವುದು. ಸೊಸೆಗೆ ನೀನು ವಲಸೆ ಬಂದವಳೆಂದು ಹೇಳಲು ಆಗುತ್ತದೆಯೇ? ಸ್ವಲ್ಪ ದಿನವಾದರೆ ಅವಳ ಕೈಗೆ ಕೀಲಿ ಕೈ ಹೋಗುತ್ತದೆ. ಹಾಗೆಯೇ ಈಗ ಸಿದ್ದರಾಮಯ್ಯ ಕೈಗೆ ಕೀಲಿ ಕೈ ಸಿಕ್ಕಿದೆ. ಹಾಗಾಗಿ ವಲಸಿಗ, ಹೊಸಬ ಎನ್ನುವ ಭೇದಭಾವ ಇಲ್ಲ’ ಎಂದು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

‘ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್‌ ಅನ್ನು ಹಾಳು ಮಾಡಬೇಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಶುಕ್ರವಾರ ಹೇಳಿದ್ದರು.

ಸಿದ್ದರಾಮಯ್ಯ ಪರ ತಮ್ಮದೇ ಶೈಲಿಯಲ್ಲಿ ಶನಿವಾರ ಮಾತನಾಡಿದ ಇಬ್ರಾಹಿಂ, ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಯಾರು? ಬಳ್ಳಾರಿ ಪಾದಯಾತ್ರೆಯಲ್ಲಿ ಅವರನ್ನು ಮುಂದೆ ತಂದವರು ಯಾರು? ಅವರು ಮುಖ್ಯಮಂತ್ರಿ ಆಗಬೇಕೆಂದು ನಾವೇ ಹೇಳಿದ್ದು ಅಲ್ಲವೇ? ಇಂಥವರೊಬ್ಬರು ಇದ್ದಾರೆ ಅಂತ ಹೇಳಿದ್ದೇ ನಾವು. ಸಿದ್ದರಾಮಯ್ಯ ಅವರಿಗೆ ಮೇಕಪ್ ಮಾಡಿದವರೇ ನಾವು’ ಎಂದು ಬಣ್ಣಿಸಿದರು.

ADVERTISEMENT

‘ಸಿದ್ದರಾಮಯ್ಯ ಹೀರೋ ಇದ್ದರೂ ಹಿನ್ನೆಲೆ ಗಾಯಕರು ಯಾರು? ಸ್ವಲ್ಪ ಕ್ಯಾಸೆಟ್ ತೆಗೆದು ನೋಡಿ. ಅದರಲ್ಲಿ ನಿಮಗೆ ಹಿನ್ನೆಲೆ ಗಾಯಕ ಯಾವತ್ತೂ ಕಾಣಲ್ಲ. ಒಂದು ರೂಗೆ ಒಂದು ಕಿಲೋ ಅಕ್ಕಿ, ಮಧ್ಯಾಹ್ನದ ಊಟ ತಂದವರು ಯಾರು? ತಮಿಳುನಾಡಿನಲ್ಲಿ ಎರಡು ದಿನ ಕುಳಿದು ಅಧ್ಯಯನ ಮಾಡಿ ನಾನು ಆ ಯೋಜನೆ ತಂದೆ. ಅದು ಯಶಸ್ವಿ ಆಯಿತು. ಯೋಜನಾ ಆಯೋಗದ ಉಪಾಧ್ಯಕ್ಷನಾಗಿ ಯೋಜನೆ ಕೊಟ್ಟೆ’ ಎಂದು ಇಬ್ರಾಹಿಂ ಹೇಳಿದರು.

ಪಕ್ಷದ ಶಾಸಕರು ‘ಮುಂದಿನ ಮುಖ್ಯಮಂತ್ರಿ’ ಬಗ್ಗೆ ಹೇಳಿಕೆ ನೀಡುತ್ತಿರುವ ಚರ್ಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ ಇಬ್ರಾಹಿಂ, ‘ಮೊದಲು ಎಂಎಲ್ಎ ಎಲೆಕ್ಷನ್ ಆಗಿ ಕಾಂಗ್ರೆಸ್ ಪಕ್ಷ ಗೆಲ್ಲಲಿ. ನಂತರ ಶಾಸಕರ ಅಭಿಪ್ರಾಯ ಪಡೆದು ತೀರ್ಮಾನ ಮಾಡಬಹುದು. ರಾಷ್ಟ್ರೀಯ ಪಕ್ಷದಲ್ಲಿ ಒಂದು ಪದ್ಧತಿ ಇರುತ್ತದೆ. ಶೇ 90ರಷ್ಟು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ಹೈಕಮಾಂಡ್ ಈ ವಿಚಾರದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ’ ಎಂದು ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯಗೆ ಒಂದು ತಂಡ ಸಿಕ್ಕಿತು. ಆದರೆ, ಯಡಿಯೂರಪ್ಪಗೆ ಅಂಥ ಟೀಮ್ ಸಿಗಲಿಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರೇ ಟೀಮ್. ಯಡಿಯೂರಪ್ಪಗೆ ಜಾತಿ ಬೆಂಬಲ ಇದೆ. ಯಡಿಯೂರಪ್ಪ ಬಿಟ್ಟು ಹೋದರೆ ಬಿಜೆಪಿಗೆ ಬರೋದು ಕೇವಲ 40 ಸೀಟು ಮಾತ್ರ’ ಎಂದು ವ್ಯಂಗ್ಯವಾಡಿದರು.

ಒಕ್ಕಲಿಗರ ಕ್ಷಮೆ ಕೇಳಿದ ಸಿ.ಎಂ. ಇಬ್ರಾಹಿಂ

‘ಕುಮಾರಸ್ವಾಮಿ ಮತ್ತು ಒಕ್ಕಲಿಗ ಸಮಾಜದ ಬಗ್ಗೆ ಸಮಾಜದ ಕೆಲವು ಮುಖಂಡರು ಮಾತನಾಡಿದ್ದರಿಂದ ಅವರ ಮನನೊಂದಿದೆ ಎಂದು ಕೇಳಿ ಮನಸ್ಸಿಗೆ ನೋವಾಯಿತು. ಅದಕ್ಕೆ ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಇಡೀ ಒಕ್ಕಲಿಗ ಸಮಾಜದ ಕ್ಷಮೆ ಕೇಳುತ್ತೇನೆ’ ಎಂದು ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಇರುತ್ತಿದ್ದ ಸದಾಶಿವನಗರದಲ್ಲಿರುವ ಗೆಸ್ಟ್‌ಹೌಸ್‌ ವಿಚಾರದಲ್ಲಿ ಅವರ ವಿರುದ್ಧ ಇತ್ತೀಚೆಗೆ ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಏಕವಚನದಲ್ಲಿ ಮಾತನಾಡಿದ್ದರು. ಜಮೀರ್‌ ಹೆಸರನ್ನು ಪ್ರಸ್ತಾಪಿಸದೇ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

‘ಇತ್ತೀಚೆಗೆ ನನ್ನ ತಾಯಿ ನಿಧನರಾಗಿದ್ದರಿಂದ ಮಾಧ್ಯಮಗಳಿಗೆ ಹೇಳಿಕೆ ಕೊಡಲು ಸಾಧ್ಯವಾಗಿಲ್ಲ. ಎಲ್ಲರೂ ಕೂಡಿಕೊಂಡು ಬದುಕಬೇಕು. ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ’ ಎಂದು ಮನವಿ ಮಾಡಿದ್ದಾರೆ.

‘ಟಿಪ್ಪು ಸುಲ್ತಾನ್‌ನ ಮಕ್ಕಳನ್ನು ಬ್ರಿಟಿಷರು ಒತ್ತೆ ಇಟ್ಟಾಗ ಮಂಡ್ಯ, ಶ್ರೀರಂಗಪಟ್ಟಣದ, ಚನ್ನಪಟ್ಟಣ ಸೇರಿದಂತೆ ಹಳೆ ಮೈಸೂರಿನ ರೈತಾಪಿ ಒಕ್ಕಲಿಗರು ದುಡ್ಡು ಕೊಟ್ಟು ಬಿಡಿಸುವ ಕೆಲಸ ಮಾಡಿದ್ದರು. ನೂರಾರು ವರ್ಷಗಳಿಂದ ಒಕ್ಕಲಿಗರು– ಮುಸಲ್ಮಾನರು ಕೂಡಿಕೊಂಡು ಜೀವಿಸಿದ್ದೇವೆ. ಇವತ್ತೂ ಹಳ್ಳಿಗಳಲ್ಲಿ ಜೀವನ ಸುಭದ್ರವಾಗಿದೆ. ಯಾರು ಏನೇ ಹೇಳಿದರೂ ಈ ಸಮಾಜದಲ್ಲಿ ಬಿರುಕು ಸಾಧ್ಯವಿಲ್ಲ’ ಎಂದಿದ್ದಾರೆ.

‘ದೇವೇಗೌಡರು ಉತ್ತಮ ನಾಯಕ. ಕುಮಾರಸ್ವಾಮಿ ಕೂಡಾ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ಟೀಕೆ ಮಾಡುವುದು ಬೇರೆ. ಆದರೆ, ವ್ಯಕ್ತಿಗತವಾಗಿ ಟೀಕೆ ಮಾಡಿದಾಗ ಏಕವಚನ ಬಳಕೆ ನಮ್ಮ ಸಂಸ್ಕೃತಿ ಅಲ್ಲ. ಹೀಗೆ ಯಾರಿಂದಲಾದರೂ ನೋವಾಗಿದ್ದರೆ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಆ ವಿಷಯ ಮರೆತುಬಿಡಿ. ಕೂಡಿ ಬಾಳೋಣ’ ಎಂದೂ ಇಬ್ರಾಹಿಂ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.