ADVERTISEMENT

ಜನತಾದರ್ಶನ: ಅಣ್ಣನಂತೆ ಅಹವಾಲು ಆಲಿಸಿದ ಸಿಎಂ

ಗಂಟೆಗಟ್ಟಲೆ ಕಾದಿದ್ದ ಅಂಗವಿಕಲರಿಗೆ ಸಂತಸ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 15:31 IST
Last Updated 15 ಸೆಪ್ಟೆಂಬರ್ 2018, 15:31 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಜನತಾ ದರ್ಶನ ನಡೆಸಿ, ಅಹವಾಲುಗಳನ್ನು ಆಲಿಸಿದರು
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಜನತಾ ದರ್ಶನ ನಡೆಸಿ, ಅಹವಾಲುಗಳನ್ನು ಆಲಿಸಿದರು   

ಬೆಳಗಾವಿ: ವಿವಿಧೆಡೆಯಿಂದ ಸಮಸ್ಯೆಗಳ ಮೂಟೆ ಹೊತ್ತು ಬಂದು ಸಾಲಾಗಿ ಕುಳಿತಿದ್ದ ಅಂಗವಿಕಲರು. ಎಲ್ಲರ ಮೊಗದಲ್ಲೂ ನಿರೀಕ್ಷೆ ಒಂದೆಡೆಯಾದರೆ, ಮುಖ್ಯಮಂತ್ರಿಯೇ ಖುದ್ದಾಗಿ ತಮ್ಮ ಬಳಿ ಬಂದು ಅಹವಾಲು ಆಲಿಸುತ್ತಾರೆಯೇ ಎಂಬ ಪ್ರಶ್ನಾರ್ಥಕ ಭಾವ ಮತ್ತೊಂದೆಡೆ. ಆದರೆ, ಅವರ ನಿರೀಕ್ಷೆ ಹುಸಿಯಾಗಲಿಲ್ಲ.

ಸುವರ್ಣ ವಿಧಾನಸೌಧದ ದಕ್ಷಿಣ ದ್ವಾರದ ಬಳಿಯ ನೆಲಮಹಡಿಯಲ್ಲಿ ಗಂಟೆಗಟ್ಟಲೆ ಕಾದಿದ್ದ ಅಂಗವಿಕಲರ ಬಳಿಗೇ ಬಂದ ಎಚ್‌.ಡಿ. ಕುಮಾರಸ್ವಾಮಿ, ತಾಳ್ಮೆಯಿಂದ ಅವರ ಮನವಿಗಳನ್ನು ವೀಕರಿಸಿದರು. ಅಣ್ಣನಂತೆ ಎಲ್ಲರ ಕಷ್ಟಗಳಿಗೆ ಕಿವಿಯಾದರು. ನೆರವಿನ ಭರವಸೆ ನೀಡಿದರು. ಮನವಿಗಳನ್ನು ಸ್ವೀಕರಿಸಿ, ಪರಿಶೀಲಿಸಿ ಅವರಿಗೆ ಸ್ಪಂದಿಸುವಂತೆ ತಮ್ಮ ಅಧಿಕಾರಿಗಳ ತಂಡಕ್ಕೆ ಸೂಚಿಸಿದರು.

ಹಿರಿಯರು, ಕಿರಿಯರು ಎಂಬ ತಾರತಮ್ಯವಿಲ್ಲದೇ ಎಲ್ಲರೊಂದಿಗೂ ಶಾಂತಚಿತ್ತರಾಗಿ ಮಾತನಾಡಿ, ಜನತಾದರ್ಶನದ ಮೊದಲ ಹಂತದಲ್ಲಿ ಎರಡೂವರೆ ತಾಸಿಗೂ ಹೆಚ್ಚು ಕಾಲ ಅಂಗವಿಕಲರ ಅಹವಾಲುಗಳನ್ನೇ ಆಲಿಸಿದ್ದು ವಿಶೇಷವಾಗಿತ್ತು. ತಡವಾಗಿ ಬಂದು ತಡರಾತ್ರಿವರೆಗೂ ಜನರ ಕಷ್ಟಕಾರ್ಪಣ್ಯಗಳನ್ನು ಕೇಳಿದರು.

ADVERTISEMENT

ದುಃಖ ತಡೆಯಲಾಗದೇ ಕಣ್ಣೀರು ಹಾಕಿದ ಮಹಿಳೆಯರು, ಅನೇಕ ವರ್ಷಗಳಿಂದ ನ್ಯಾಯ ಸಿಗದೇ ಕಚೇರಿಗಳಿಗೆ ಅಲೆದಾಡಿ ಸುಸ್ತಾದವರಿಗೆ ಮುಖ್ಯಮಂತ್ರಿಯ ಭರವಸೆಯ ಮಾತುಗಳು ಸಾಂತ್ವನ ನೀಡಿದವು. ಭರವಸೆಯ ಆಶಾಕಿರಣಗಳನ್ನು ಮೂಡಿಸಿದವು.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾಸನ, ಮಂಡ್ಯ, ಧಾರವಾಡ, ಹಾವೇರಿ... ಹೀಗೆ ಹಲವು ಜಿಲ್ಲೆಗಳಿಂದ ಬಂದಿದ್ದ ಬಹಳಷ್ಟು ಮಂದಿ ಕೈಮುಗಿದು ಸಹಾಯ ಕೋರಿದರು. ಕೆಲವರು ಕಾಲಿಗೆ ನಮಸ್ಕರಿಸಿ ಅಳಲು ತೋಡಿಕೊಳ್ಳಲು ಮುಂದಾದರು. ಅದಕ್ಕೆ ಆಸ್ಪದ ನೀಡದ ಸಿಎಂ, ‘ನಿಮ್ಮ ಅಹವಾಲು ಕೇಳಲೆಂದೇ ಇಲ್ಲಿಗೆ ಬಂದಿದ್ದೇನೆ. ಆತಂಕ ಪಡಬೇಡಿ, ಏನಿದ್ದರೂ ಹೇಳಿಕೊಳ್ಳಿ’ ಎಂದು ಧೈರ್ಯ ತುಂಬಿದರು.

‌ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ವಿವಿಧೆಡೆಯಿಂದ ಬೆಳಿಗ್ಗೆಯಿಂದಲೇ ಬಂದಿದ್ದ 1,272 ಮಂದಿ ಹೆಸರು ನೋಂದಾಯಿಸಿದ್ದರು. ಇದಲ್ಲದೇ, ನೂರಾರು ಮಂದಿ ಬಂದಿದ್ದರು. ಎಲ್ಲರನ್ನೂ ನೇರವಾಗಿ ಮಾತನಾಡಿಸಿ, ಸಹನೆಯಿಂದ ಮನವಿ ತೆಗೆದುಕೊಂಡರು. ನೊಂದ ಮನಸ್ಸುಗಳ ಕಣ್ಣೀರು ಒರೆಸುವ ಪ್ರಯತ್ನವನ್ನು ಮಾಡಿದರು. ಕೆಲವು ಮನವಿಗಳಿಗೆ ತಕ್ಷಣವೇ ಕ್ರಮ ವಹಿಸುವಂತೆ ಸೂಚನೆ (ಷರಾ) ಬರೆದರು.

900ಕ್ಕೂ ಹೆಚ್ಚು ಮಂದಿ ಅಂಗವಿಕಲರು ಬಂದಿದ್ದರು. ಬಹುತೇಕರು ಚಿಕಿತ್ಸೆಗೆ ಆರ್ಥಿಕ ನೆರವು ಕೋರಿದರು. ₹ 2, ₹ 3 ಹಾಗೂ ₹ 5 ಲಕ್ಷ ನೆರವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

ಅನಾರೋಗ್ಯದಿಂದ ಬಳಲುತ್ತಿರುವ ಎರಡು ಕುಟುಂಬಗಳಿಗೆ ತಲಾ ₹ 5 ಲಕ್ಷ ನೀಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.