ADVERTISEMENT

ಅಧಿಕಾರ ಕಳೆದುಕೊಳ್ಳುವ ಭೀತಿ: ಆದರೂ, ತಲಕಾವೇರಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 19:14 IST
Last Updated 15 ಅಕ್ಟೋಬರ್ 2018, 19:14 IST

ಮಡಿಕೇರಿ: ಕಾವೇರಿ ನದಿಯ ಉಗಮ ಸ್ಥಳ ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಭೀತಿಯಿದ್ದರೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.

‘ಇದುವರೆಗೂ ಯಾವ ಮುಖ್ಯಮಂತ್ರಿಯೂ ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದು ನೆನಪಿಲ್ಲ. ಅ.17ರಂದು ಸಂಜೆ 6.43ಕ್ಕೆ ನಡೆಯುವ ತೀರ್ಥೋದ್ಭವಕ್ಕೆ ಪ್ರಥಮ ಬಾರಿಗೆ ಮುಖ್ಯಮಂತ್ರಿ ಆಗಮಿಸುತ್ತಿದ್ದಾರೆ’ ಎಂದು ಕ್ಷೇತ್ರದ ಅರ್ಚಕರೊಬ್ಬರು ಹೇಳುತ್ತಾರೆ.

1999ರಲ್ಲಿ ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು (ತೀರ್ಥೋದ್ಭವ ಸಂದರ್ಭ ಅಲ್ಲ). ಬಳಿಕ ಪಟೇಲ್‌ ಅವರು ಅಧಿಕಾರ ಕಳೆದುಕೊಂಡಿದ್ದರು. ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಯಾವ ಮುಖ್ಯಮಂತ್ರಿಯೂ ಇಲ್ಲಿಗೆ ಮತ್ತೆ ಭೇಟಿ ನೀಡಿರಲಿಲ್ಲ. ಆದರೆ, ಕುಮಾರಸ್ವಾಮಿ ಕಳೆದ ಜುಲೈ 20ರಂದು ಭೇಟಿ ನೀಡಿ ಮಹಾಸಂಕಲ್ಪ ಪೂಜೆ ನೆರವೇರಿಸಿದ್ದರು.

ADVERTISEMENT

ಭಾಗಮಂಡಲದ ತ್ರಿವೇಣಿ ಸಂಗಮ ದಾಟಿದ್ದ ಕುಮಾರಸ್ವಾಮಿ ಅವರು ನವೆಂಬರ್‌ ವೇಳೆಗೆ ಅಧಿಕಾರದಿಂದ ಕೆಳಗೆ ಇಳಿಯಲಿದ್ದಾರೆ ಎಂದು ಮಡಿಕೇರಿ ಜೋತಿಷಿ ಕೃಷ್ಣ ಉಪಾಧ್ಯ ಭವಿಷ್ಯ ನುಡಿದಿದ್ದರು. ಈಗ ಮತ್ತೆ ಅದೇ ಕ್ಷೇತ್ರಕ್ಕೆ ಅವರು ಭೇಟಿ ನೀಡುತ್ತಿದ್ದಾರೆ.

‘ಭೂಕುಸಿತದಿಂದ ಕಂಗಾಲಾಗಿರುವ ಜನರ ಸಂಕಷ್ಟ ನಿವಾರಿಸುವಂತೆ ಮುಖ್ಯಮಂತ್ರಿ ಕಾವೇರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಮೂಢನಂಬಿಕೆಗೆ ಹೆದರುವುದಿಲ್ಲ’ ಎಂದು ಅವರ ಆಪ್ತರು ಹೇಳುತ್ತಾರೆ.

ಸಂವಾದ: ಅಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಭೂಕುಸಿತದಿಂದ ನೆಲೆ ಕಳೆದುಕೊಂಡಿರುವ ನಿರಾಶ್ರಿತರ ಅಳಲು ಆಲಿಸಲಿದ್ದಾರೆ. ಗಾಂಧಿ ಮೈದಾನದಲ್ಲಿ ರೈತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಅಧಿಕಾರಿಗಳಿಂದ ಪುನರ್ವಸತಿ ಹಾಗೂ ಬೆಳೆ ಪರಿಹಾರಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಅನಾಹುತ ನಡೆದು ಎರಡು ತಿಂಗಳು ಕಳೆದರೂ ಪರಿಹಾರ ಕಾರ್ಯಗಳು ಚುರುಕಾಗಿಲ್ಲ. ರಾಜ್ಯದ ವಿವಿಧೆಡೆಯಿಂದ ಅಪಾರ ದೇಣಿಗೆ ಬಂದಿದ್ದರೂ ಸಂತ್ರಸ್ತರಿಗೆ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಕಾಫಿ ಬೆಳೆಗಾರರು, ಸಂತ್ರಸ್ತರು ಹಾಗೂ ಕೊಡವ ನ್ಯಾಷನಲ್‌ ಕೌನ್ಸಿಲ್‌ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಸಂತ್ರಸ್ತರ ಬೇಡಿಕೆ ಆಲಿಸಲು ಮುಖ್ಯಮಂತ್ರಿ ಮಡಿಕೇರಿಗೆ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.