ADVERTISEMENT

ಸ್ಮಶಾನ, ಖಬರಸ್ಥಾನಗಳಿಗೆ ತಕ್ಷಣ ನಿವೇಶನ ನೀಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ

​ಪ್ರಜಾವಾಣಿ ವಾರ್ತೆ
Published 30 ಮೇ 2025, 15:35 IST
Last Updated 30 ಮೇ 2025, 15:35 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಬೆಂಗಳೂರು: ‘ಸ್ಮಶಾನ, ರುದ್ರಭೂಮಿ ಮತ್ತು ಖಬರಸ್ಥಾನಗಳಿಗೆ ನಿವೇಶನ ಮಂಜೂರು ಮಾಡಿ ಎಂದು ಬಂದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ನಿವೇಶನಗಳನ್ನು ತಕ್ಷಣವೇ ಒದಗಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ವೇಳೆ, ‘ನಿವೇಶನಗಳು ಲಭ್ಯವಿಲ್ಲ. ಹೀಗಾಗಿ ಅರ್ಜಿಗಳು ವಿಲೇವಾರಿ ಆಗಿಲ್ಲ’ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ‘ಸ್ಮಶಾನ ಮತ್ತು ಖಬರಸ್ಥಾನ ಒದಗಿಸದೇ ಹೋದರೆ ಜನರು ಎಲ್ಲಿ ಅಂತ್ಯಕ್ರಿಯೆ ನಡೆಸಬೇಕು. ಇವುಗಳಿಗೆ ನಿವೇಶನ ಮಂಜೂರು ಮಾಡುವಲ್ಲಿ ವಿಳಂಬ ಸರಿಯಲ್ಲ. ಲಭ್ಯವಿರುವ ನಿವೆಶನವನ್ನು ತಕ್ಷಣವೇ ಒದಗಿಸಬೇಕು. ಸರ್ಕಾರಿ ನಿವೇಶನ ಇಲ್ಲದೇ ಇದ್ದರೆ, ಖಾಸಗಿ ನಿವೇಶನವನ್ನು ಖರೀದಿಸಿ ಹಂಚಿಕೆ ಮಾಡಬೇಕು’ ಎಂದು ಸೂಚಿಸಿದರು.

‘ವಿದ್ಯಾರ್ಥಿನಿಲಯಗಳಿಗೆ ಜನವಸತಿ ಪ್ರದೇಶದಿಂದ ಬಹಳ ದೂರದಲ್ಲಿ ನಿವೇಶನ ಒದಗಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ನಿರ್ಜನ ಪ್ರದೇಶದಲ್ಲಿ ನಿವೇಶನ ನೀಡಿದರೆ, ಭದ್ರತೆಯ ಅಪಾಯ ತಲೆದೋರುವುದಿಲ್ಲವೇ? ಇದನ್ನೆಲ್ಲಾ ಪರಿಗಣಿಸಿ ಜನವಸತಿ ಪ್ರದೇಶದಲ್ಲಿಯೇ ನಿವೇಶನ ಒದಗಿಸಬೇಕು. ನಿವೃತ್ತ ಸೈನಿಕರು ನಿವೇಶನಕ್ಕೆ ಸಲ್ಲಿಸುವ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಸರಿಯಲ್ಲ. ದೇಶಕ್ಕಾಗಿ ಹೋರಾಡಿದವರಿಗೆ ನಿವೇಶನ ನೀಡದೇ ಇದ್ದರೆ ಹೇಗೆ. ಅವರಿಗೆ ನಿವೇಶನಗಳನ್ನು ತಕ್ಷಣವೇ ನೀಡಬೇಕು’ ಎಂದು ಸೂಚಿಸಿದರು.

‘ಈ ಹಿಂದೆ ನಡೆಸಿದ ಸಭೆಯಲ್ಲೂ ನಿವೇಶನ ಲಭ್ಯವಿಲ್ಲ ಎಂದು ಹೇಳಿದ್ದಿರಿ. ಈಗಲೂ ಅದನ್ನೇ ಹೇಳುತ್ತಿದ್ದೀರಿ. ಹಾಗಿದ್ದರೆ ಈ ಮಧ್ಯೆ ನೀವು ಮಾಡಿದ ಕೆಲಸವೇನು? ಮುಂದಿನ ಸಭೆಯಲ್ಲಿ ಇಂತಹ ನೆಪ ಹೇಳಬಾರದು’ ಎಂದು ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.