ಎತ್ತಿನ ಹೊಳೆ
ಬೆಂಗಳೂರು: ಎತ್ತಿನ ಹೊಳೆ ಯೋಜನೆಗೆ ಸರಾಸರಿ 18.08 ಟಿಎಂಸಿ ಅಡಿ ನೀರು ಲಭ್ಯವಿದೆ. ಉಳಿದ 6 ಟಿಎಂಸಿ ಅಡಿ ಕೊರತೆ ನೀಗಿಸಲು ನೀರಿನ ತಿರುವು ಕುರಿತು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ‘ಪರಿಷ್ಕೃತ ಅಂದಾಜು ₹23,251.66 ಕೋಟಿ ನಿಗದಿ ಮಾಡಲಾಗಿದ್ದು, ಇದುವರೆಗೆ ₹17,147 ಕೋಟಿ ವೆಚ್ಚವಾಗಿದೆ. 14.056 ಟಿಎಂಸಿ ಅಡಿ ಕುಡಿಯುವ ನೀರು, 9.953 ಟಿಎಂಸಿ ಅಡಿ ನೀರು ಕೆರೆಯನ್ನು ತುಂಬಿಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಯೋಜನಾ ವ್ಯಾಪ್ತಿಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು. ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಕೆರೆಗಳನ್ನು ತುಂಬಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. 2027ರ ಮಾರ್ಚ್ ಒಳಗೆ ಇಡೀ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಖಾತ್ರಿಪಡಿಸಬೇಕು. ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಲು ಇರುವ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದನೇ ಹಂತದಲ್ಲಿ ನದಿ ಪಾತ್ರದ ಏಳು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಎರಡನೇ ಹಂತದ 33 ಕಾಮಗಾರಿಗಳಲ್ಲಿ 11 ಪೂರ್ಣಗೊಳಿಸಲಾಗಿದೆ. 16 ಕಿಮೀ ವ್ಯಾಪ್ತಿಯ ಕಾಮಗಾರಿ ಪ್ರಾರಂಭಿಸಬೇಕಿದೆ. ಅವುಗಳಲ್ಲಿ 6 ಎಕರೆ ಅರಣ್ಯ ಪ್ರದೇಶ ಹಾಗೂ 10 ಕಿ.ಮೀ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್, ಸಚಿವರಾದ ಜಿ. ಪರಮೇಶ್ವರ, ಕೆ.ಎಚ್. ಮುನಿಯಪ್ಪ, ಕೃಷ್ಣ ಬೈರೇಗೌಡ, ಡಾ.ಎಂ.ಸಿ. ಸುಧಾಕರ್, ಬೈರತಿ ಸುರೇಶ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.