ADVERTISEMENT

ಶಾಲಾ ಶೈಕ್ಷಣಿಕ ವರ್ಷದ ಆರಂಭ: ಮಕ್ಕಳಿಗೆ ಸಂಭ್ರಮದ ಸ್ವಾಗತ

​ಪ್ರಜಾವಾಣಿ ವಾರ್ತೆ
Published 29 ಮೇ 2025, 15:52 IST
Last Updated 29 ಮೇ 2025, 15:52 IST
‘ಶಾಲಾ ಪ್ರಾರಂಭೋತ್ಸವ 2025 - 2026’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ –ಪ್ರಜಾವಾಣಿ ಚಿತ್ರ
‘ಶಾಲಾ ಪ್ರಾರಂಭೋತ್ಸವ 2025 - 2026’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಳಿಗ್ಗೆಯೇ ಎದ್ದು, ಸಮವಸ್ತ್ರ ತೊಟ್ಟು ಬಂದು ಕಾದು ಕುಳಿತಿದ್ದ ಮಕ್ಕಳು ಒಂದೆಡೆ. ಇನ್ನೇನು ಮಳೆ ಸುರಿಸಿಯೇ ಬಿಡುತ್ತೇವೆ ಎಂಬಂತೆ ಆಗ್ಗಾಗ್ಗೆ ಸೂರ್ಯನನ್ನು ಮರೆಮಾಚುತ್ತಿದ್ದ ಮೋಡಗಳು ಇನ್ನೊಂದೆಡೆ. ಬಹಳ ದಿನಗಳ ನಂತರ ಸಿಕ್ಕಿದ್ದ ಸಹಪಾಠಿಗಳ ಜತೆಗಿನ ಮಕ್ಕಳ ಮಾತುಕತೆ–ಆಟದ ಮಧ್ಯೆ, ಅವರನ್ನು ಶಿಸ್ತಾಗಿ ಕೂರಿಸಲು ಶಿಕ್ಷಕರು ಹೊರಡಿಸುತ್ತಿದ್ದ ಆಜ್ಞೆಗಳು ವಿಶಾಲ ಬಯಲಿನಲ್ಲಿ ಚದುರಿಹೋದವು.

ಶಾಲಾ ಶೈಕ್ಷಣಿಕ ವರ್ಷದ ಆರಂಭವನ್ನು ಒಂದು ಉತ್ಸವವನ್ನಾಗಿ ನಡೆಸುವ ಸಲುವಾಗಿ ಶಾಲಾ ಶಿಕ್ಷಣ ಇಲಾಖೆಯು ನಗರದ ಆಡುಗೋಡಿ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ, ‘ಶಾಲಾ ಪ್ರಾರಂಭೋತ್ಸವ’ದಲ್ಲಿ ಕಂಡ ದೃಶ್ಯಗಳಿವು. ಶಾಲೆ ಪ್ರವೇಶಕ್ಕೆ ಕಾತರಾಗಿದ್ದ ಮಕ್ಕಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜತೆಯಾದರು.

ಕಾರಿಳಿದು ಮಕ್ಕಳೊಂದಿಗೆ ಶಾಲೆಯತ್ತ ಹೆಜ್ಜೆಹಾಕಿದ ಸಿದ್ದರಾಮಯ್ಯ ಅವರಿಗೆ ಹಸ್ತಲಾಘವ ನೀಡಿ, ವಿದ್ಯಾರ್ಥಿಗಳು ಖುಷಿಪಟ್ಟರು. ಸಿದ್ದರಾಮಯ್ಯನವರೂ ಮಕ್ಕಳ ತಲೆ ನೇವರಿಸಿ, ‘ಚೆನ್ನಾಗಿ ಓದಬೇಕು’ ಎಂದು ತಿಳಿಹೇಳಿದರು. ಶಾಲೆಗೆ ಮಕ್ಕಳ ಸ್ವಾಗತಕ್ಕಾಗಿಯೇ ರೂಪಿಸಿದ್ದ ವೇದಿಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮಕ್ಕಳ ಹರ್ಷೋದ್ಘಾರವೂ ಹೆಚ್ಚಿತು. 

ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದಿದ್ದ ವಿದ್ಯಾರ್ಥಿಗಳು, ದೂರದ ಊರುಗಳಿಂದ ಸನ್ಮಾನ ಕಾರ್ಯಕ್ರಮಕ್ಕೆ ಬಂದಿದ್ದರು. ಒಬ್ಬೊಬ್ಬರನ್ನೂ ವೇದಿಕೆಗೆ ಬರಮಾಡಿಕೊಂಡ ಮಧು ಬಂಗಾರಪ್ಪ ಅವರು, ವಿದ್ಯಾರ್ಥಿಗಳನ್ನು ಮುಖ್ಯಮಂತ್ರಿಗೆ ಪರಿಚಯಿಸಿಕೊಟ್ಟರು. ಪ್ರತಿ ವಿದ್ಯಾರ್ಥಿಯ ಹೆಸರು ಮತ್ತು ಅಂಕಗಳ ಬಗ್ಗೆ ನಿರೂಪಕರು ವಿವರ ನೀಡುತ್ತಿದ್ದಂತೆ ಉಳಿದ ಮಕ್ಕಳು ಚಪ್ಪಾಳೆ ತಟ್ಟಿ ಅಭಿನಂದಿಸಿದರು. 

ನಂತರ ಶಾಲಾ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು ಸಿಹಿ ನೀಡಿ ಸ್ವಾಗತಿಸಲಾಯಿತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಿಕ್ಷಣ ಸಚಿವರ ಮಾತು ಕೇಳಿದ ವಿದ್ಯಾರ್ಥಿಗಳು, ಅವರ ಕಿವಿಮಾತುಗಳಿಗೆ ತಲೆಯಾಡಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಎಲ್ಲರಿಗೂ ಸಿಹಿ ನೀಡಲಾಯಿತು. ನಂತರ ಕೆಲವರು ತಮ್ಮ ತರಗತಿಗಳತ್ತ ನುಗ್ಗಿದರೆ, ಕೆಲವರು ಮೈದಾನಕ್ಕಿಳಿದು ಕುಣಿದು ಕುಪ್ಪಳಿಸಿದರು.

‘ಹೆಚ್ಚು ಭಾಷೆ ಕಲಿಯಿರಿ, ಕನ್ನಡದಲ್ಲಿ ಮುಂದಿರಿ’

‘ನೀವು ಹೆಚ್ಚೆಚ್ಚು ಭಾಷೆ ಕಲಿಯಬೇಕು. ಆದರೆ ಕನ್ನಡದಲ್ಲಿ ಸದಾ ಮುಂದಿರಬೇಕು. ಕನ್ನಡದಲ್ಲಿ ಕಲಿತರೆ ಮಕ್ಕಳು ಪ್ರತಿಭಾವಂತರಾಗುವುದಿಲ್ಲ ಎನ್ನುವುದು ತಪ್ಪು ಕಲ್ಪನೆ. ನಮ್ಮ ಕನ್ನಡ ಶಾಲೆಯ ಮಕ್ಕಳು ಈ ಬಾರಿಯ ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಶಾಲಾ ಶಿಕ್ಷಣ ಇಲಾಖೆಯು ಹಲವು ಸುಧಾರಣೆಗಳನ್ನು ತಂದಿದೆ. ಕೃಪಾಂಕ ನೀಡುವುದನ್ನು ನಿಲ್ಲಿಸಿದೆ. ಎರಡು ಮತ್ತು ಮೂರನೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಮೂಲಕ ಉತ್ತಮ ಫಲಿತಾಂಶ ಬರುವಂತೆ ಮಾಡಿದೆ. ಉತ್ತಮ ಫಲಿತಾಂಶ ಬಂದರೆ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿಯೂ ಹೆಚ್ಚುತ್ತದೆ’ ಎಂದರು.

‘ಮಕ್ಕಳಿಗೆ ಉತ್ತಮ‌ ಪೌಷ್ಠಿಕಾಂಶ ಸಿಕ್ಕರೆ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಿ ಓದಲು ಸಾಧ್ಯ. ಈ‌ ಕಾರಣಕ್ಕೇ ನಾವು ಮಕ್ಕಳಿಗೆ ಮೊಟ್ಟೆ ಬಾಳೆಹಣ್ಣು ಚಿಕ್ಕಿ ಹಾಲು ಕೊಡುತ್ತಿದ್ದೇವೆ. ಇದರ ಜತೆಗೆ ಪಠ್ಯ ಸಮವಸ್ತ್ರ ಶೂ ಸಾಕ್ಸ್ ಪುಸ್ತಕಗಳನ್ನೂ ಸರ್ಕಾರದಿಂದಲೇ ಕೊಡುತ್ತಿದ್ದೇವೆ. ಇವನ್ನೆಲ್ಲಾ ಸರಿಯಾಗಿ ಬಳಸಿಕೊಂಡು ಮಕ್ಕಳು ಮುಂದೆಬರಬೇಕು’ ಎಂದರು. ‘1992–93ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ 1 ಲಕ್ಷ ಶಿಕ್ಷಕರ ನೇಮಕಾತಿಗಾಗಿ ಅನುಮೋದನೆ ನೀಡಿದ್ದೆ. ಈ ಬಾರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₹725 ಕೋಟಿ ನೀಡಿದ್ದೇವೆ. ಗುಣಮಟ್ಟದಲ್ಲಿ ಸರ್ಕಾರಿ ಶಾಲೆಗಳು ಹಿಂದೆ ಉಳಿದಿಲ್ಲ. ಪರೀಕ್ಷಾ ಫಲಿತಾಂಶವೇ ಅದನ್ನು ಸಾಬೀತು ಮಾಡಿದೆ’ ಎಂದರು.

‘ರಾಜನಾಗುತ್ತೀರೋ ಸೇವಕನಾಗುತ್ತೀರೋ’

‘ಚೆನ್ನಾಗಿ ಓದಿದರೆ ರಾಜನಾಗುತ್ತೀರಿ. ಇಲ್ಲವೇ ಸೇವಕನಾಗುತ್ತೀರಿ. ಯಾರೂ ಕದಿಯಲಾಗದ ಬೆಂಕಿ ಸುಡಲಾರದ ನೀರಿನಲ್ಲಿ ನೆನೆಯದ ಸಂಪತ್ತು ಎಂದರೆ ಅದು ವಿದ್ಯೆ ಮಾತ್ರ. ನೀವು ರಾಜನಾಗುತ್ತೀರೋ ಅಥವಾ ಸೇವಕನಾಗುತ್ತೀರೋ ಎಂಬುದನ್ನು ನೀವೇ ನಿರ್ಧರಿಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು. ‘ರಾಜ್ಯದಲ್ಲಿ 2000 ಸರ್ಕಾರಿ ಶಾಲೆಗಳನ್ನು ಪಬ್ಲಿಕ್‌ ಶಾಲೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನೂ ಒಳಗೊಂಡು ಬೇರೆಡೆಯಿಂದ ಈ ಪಬ್ಲಿಕ್‌ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುತ್ತೇವೆ. ಪಂಚಾಯತಿ ಮಟ್ಟದಲ್ಲಿ ಅನೇಕ ಸಂಸ್ಥೆಗಳು ಶಾಲೆಗಳ ನಿರ್ಮಾಣಕ್ಕೆ ಮುಂದೆ ಬಂದಿವೆ’ ಎಂದರು.

‘ಕೇಂದ್ರದ ಪ್ರಶಂಸೆ’

‘ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ಪದ್ಧತಿ ಜಾರಿಯಲ್ಲಿದೆ. ಈ ಪದ್ಧತಿಯ ಕಾರಣದಿಂದ ಎರಡು ವರ್ಷಗಳಲ್ಲಿ ಫಲಿತಾಂಶದ ಪ್ರಮಾಣ ಸುಧಾರಿಸಿದೆ. ಈ ಪದ್ಧತಿಯ ಬಗ್ಗೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಪ್ರಶಂಸೆ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಇದನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಚಿಂತನೆ ನಡೆಸಿದೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ‘ಈ ಪದ್ಧತಿ ಜಾರಿ ಮಾಡಿದಾಗಿನಿಂದ ಉತ್ತೀರ್ಣರಾಗುವವರ ಪ್ರಮಾಣ ಹೆಚ್ಚಾಗಿದೆ. ಎರಡನೇ ಪರೀಕ್ಷೆಯಲ್ಲಿ 60 ಸಾವಿರ ಮಕ್ಕಳು ತಮ್ಮ ಉತ್ತೀರ್ಣರಾಗಿದ್ದಾರೆ ಮತ್ತು ಅಂಕಗಳನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಪರಿಣಾಮವಾಗಿ ಸಿಇಟಿಯಲ್ಲಿ ಅವರ ರ‍್ಯಾಂಕ್ ಸಹ ಉತ್ತಮಗೊಂಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.