ADVERTISEMENT

ಬಿಜೆಪಿ ಶಾಸಕರ ಓಲೈಸಲು ಅನುದಾನದಲ್ಲಿ ತಾರತಮ್ಯ: ಎಚ್‌.ಕೆ ಕುಮಾರಸ್ವಾಮಿ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 17:32 IST
Last Updated 21 ಜುಲೈ 2021, 17:32 IST
ಎಚ್‌.ಕೆ.ಕುಮಾರಸ್ವಾಮಿ
ಎಚ್‌.ಕೆ.ಕುಮಾರಸ್ವಾಮಿ   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಪಕ್ಷದ ಶಾಸಕರನ್ನು ಓಲೈಸುವುದಕ್ಕಾಗಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಆರೋಪಿಸಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಹಂಚಿಕೆ ಮಾಡಿರುವ ಮುಖ್ಯಮಂತ್ರಿ, ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಕಡಿಮೆ ಮೊತ್ತ ನೀಡಿದ್ದಾರೆ. ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿರುವುದರಿಂದ ಶಾಸಕರನ್ನು ಓಲೈಸಿಕೊಳ್ಳಲು ಈ ರೀತಿ ಮಾಡಿದ್ದಾರೆ’ ಎಂದರು.

ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳ ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವೇ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. ಕೆಲವು ಇಲಾಖೆಗಳು ನಿಗದಿತ ಅನುದಾನ ಬಿಡುಗಡೆ ಮಾಡದೆ ಅನ್ಯಾಯ ಮಾಡುತ್ತಿವೆ ಎಂದು ದೂರಿದರು.

ADVERTISEMENT

ಹೇಮಾವತಿ ಯೋಜನೆ ಕಾಮಗಾರಿಗಾಗಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ₹ 8 ಕೋಟಿ ಒದಗಿಸಲಾಗಿದೆ. ಅಲ್ಲಿ ಪುನರ್ವಸತಿ ಮತ್ತು ಅಚ್ಚುಕಟ್ಟು ಪ್ರದೇಶವೇ ಇಲ್ಲ. ಆದರೆ, ಪುನರ್ವಸತಿ ಮತ್ತು ಅಚ್ಚುಕಟ್ಟು ಪ್ರದೇಶಗಳಿರುವ ಸಕಲೇಪುರ ವಿಧಾನಸಭಾ ಕ್ಷೇತ್ರಕ್ಕೆ ಕೇವಲ ₹ 3 ಕೋಟಿ ಅನುದಾನ ನೀಡಲಾಗಿದೆ. ಇಂತಹ ತಾರತಮ್ಯದ ಧೋರಣೆಯನ್ನು ವಿಧಾನಮಂಡಲ ಅಧವೇಶನದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.