ADVERTISEMENT

ಸಿ.ಎಂ ಭೋಜನ ಕೂಟಕ್ಕೆ ಹಲವು ಶಾಸಕರ ಗೈರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 20:23 IST
Last Updated 2 ಫೆಬ್ರುವರಿ 2021, 20:23 IST
   

ಬೆಂಗಳೂರು: ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ರಾತ್ರಿ ಕರೆದಿದ್ದ ಭೋಜನ ಕೂಟಕ್ಕೆ ಹಲವು ಶಾಸಕರು ಮತ್ತು ಸಚಿವರು ಗೈರಾಗಿದ್ದರು.

ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ನಿವಾಸ "ಕಾವೇರಿ"ಯಲ್ಲಿ ಭೋಜನ ಕೂಟ ಏರ್ಪಡಿಸಲಾಗಿತ್ತು.

ಶಾಸಕರಾದ ಸುನಿಲ್‌ ಕುಮಾರ್‌, ಬಸನಗೌಡ ಪಾಟೀಲ ಯತ್ನಾಳ, ಅಪ್ಪಚ್ಚುರಂಜನ್‌, ತಿಪ್ಪಾರೆಡ್ಡಿ, ಅರವಿಂದ ಬೆಲ್ಲದ, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಜೆ.ಸಿ.ಮಾಧುಸ್ವಾಮಿ ಮತ್ತು ಆನಂದ್‌ ಸಿಂಗ್‌ ಹಾಜರಾಗಿರಲಿಲ್ಲ. ಸುನಿಲ್ ಕುಮಾರ್ ಪಕ್ಷದ ಕೆಲಸದ ಮೇಲೆ ಕೇರಳಕ್ಕೆ ಹೋಗಿದ್ದರೆ, ಪಂಚಮಸಾಲಿ ಸ್ವಾಮೀಜಿಗಳ ಪಾದಯಾತ್ರೆ ಚಿತ್ರದುರ್ಗಕ್ಕೆ ಬಂದಿರುವುದರಿಂದ ತಿಪ್ಪಾರೆಡ್ಡಿ ಅಲ್ಲಿಗೆ ತೆರಳಿದ್ದಾರೆ.

ADVERTISEMENT

ಕೇವಲ ಭೋಜನ ಕೂಟ ಆಗಿದ್ದರಿಂದ ಬೇರೆ ಯಾವುದೇ ರೀತಿಯ ಚರ್ಚೆಗೆ ಅವಕಾಶ ಇರಲಿಲ್ಲ. ಶಾಸಕರು ಒಬ್ಬೊಬ್ಬರಾಗಿ ಬಂದು ಹೋದರು. ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರ ಕುಶಲೋಪರಿ ವಿಚಾರಿಸಿದರು ಎಂದು ಮೂಲಗಳು ಹೇಳಿವೆ.

ಬಜೆಟ್‌ಗೆ ಮುನ್ನ ಶಾಸಕರ ಸಭೆ ಕರೆದು ಬಜೆಟ್‌ ವಿಚಾರವಾಗಿ ಮಾತುಕತೆ ನಡೆಸಲಿದ್ದಾರೆ. ಕೋವಿಡ್‌ ಮತ್ತು ಆರ್ಥಿಕ ಸಂಕಷ್ಟದ ಕಾರಣ ಅಗತ್ಯ ಮತ್ತು ಅನಿವಾರ್ಯವಾದ ಪ್ರಸ್ತಾಪಗಳನ್ನು ಮಂಡಿಸುವಂತೆ ಯಡಿಯೂರಪ್ಪ ಸೂಚಿಸಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.