ಬೆಂಗಳೂರು: ಪ್ಲಾಸ್ಟಿಕ್ ತ್ಯಾಜ್ಯ ಮುಕ್ತಗೊಳಿಸುವ ಉದ್ದೇಶದಿಂದ ‘ಬಾಟಲಿ ಹಾಕಿದರೆ ಕಾಯಿನ್ ನೀಡುವ ಕಿಯೊಸ್ಕ್’ ಅನ್ನು ರಾಜ್ಯದಾದ್ಯಂತ ಸ್ಥಾಪಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉದ್ದೇಶಿಸಿದೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಮನೆ ಮೈದಾನದಲ್ಲಿ ಜೂನ್ 5ರಂದು ಆಯೋಜಿಸಲಾಗುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕಿಯೊಸ್ಕ್‌ನ ಪ್ರಾತ್ಯಕ್ಷಿಕೆ ನೀಡಲಾಗುವುದು. ಇದನ್ನು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
‘ರಾಜ್ಯದ ಸಂಸ್ಥೆಯೊಂದು ಕಿಯೊಸ್ಕ್ ತಯಾರಿಸಿದ್ದು, ಅದನ್ನು ಅಳವಡಿಸಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಬಹುದಾಗಿದೆ. ಎಷ್ಟು ಬಾಟಲ್ ಅನ್ನು ಕಿಯೊಸ್ಕ್‌ಗೆ ಹಾಕಿದರೆ ₹1 ಕಾಯಿನ್ ಲಭ್ಯವಾಗುತ್ತದೆ ಎಂಬುದನ್ನು, ನಿರ್ವಹಣಾ ಸಂಸ್ಥೆ ನಿರ್ಧರಿಸುತ್ತದೆ.ಕಿಯೊಸ್ಕ್‌ಗೆ (ಯಂತ್ರ) ಸ್ಥಳೀಯ ಸಂಸ್ಥೆಗಳು ಹಣ ಪಾವತಿಸಬೇಕು. ಸಂಸ್ಥೆ ನಿರ್ವಹಣೆ ಮಾಡಲಿದೆ. ಪ್ಲಾಸ್ಟಿಕ್ ಮುಕ್ತಗೊಳಿಸುವ ಪ್ರಯತ್ನದಲ್ಲಿ ಇದು ಪ್ರಮುಖ ಹೆಜ್ಜೆಯಾಗಲಿದೆ’ ಎಂದರು.
‘ಬೆಂಗಳೂರಿನ ಕೆರೆಗಳಿಗೆ ನೀರು ಹರಿಯುವ ಮುನ್ನವೇ ತ್ಯಾಜ್ಯನೀರು ಸಂಸ್ಕರಣೆ ಘಟಕ (ಎಸ್‌ಟಿಪಿ) ಸ್ಥಾಪಿಸಬೇಕು. ಎಸ್‌ಟಿಪಿಗಳಲ್ಲಿ ನೀರು ಸರಿಯಾಗಿ ಸಂಸ್ಕರಣೆಯಾಗದೆ, ರಾಜ್ಯದ ಎಲ್ಲ ಭಾಗಗಳಲ್ಲಿ ಅಂತರ್ಜಲ, ನದಿಗಳು ಮಾಲಿನ್ಯಗೊಳ್ಳುತ್ತಿವೆ. ರಾಜ್ಯದ ಶೇ 50ರಷ್ಟು ಜನರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ನದಿಯಲ್ಲಿ ಮಾಲಿನ್ಯ ತಡೆಗೆ ಪರಿಸರಸ್ನೇಹಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಈಗ ಈ ಕೆಲಸಗಳನ್ನು ಮಾಡದಿದ್ದರೆ, ಮುಂದೆ ದೇವರು ಬಂದರೂ ನದಿ–ಕೆರೆಗಳನ್ನು ಕಾಪಾಡಲು ಸಾಧ್ಯವಿಲ್ಲ’ ಎಂದು ನರೇಂದ್ರಸ್ವಾಮಿ ಹೇಳಿದರು.
‘ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದ್ದು, ಮೀಸಲಾತಿ ಅಂತಿಮಗೊಂಡ ಕೂಡಲೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ರಾಜ್ಯದ ಪ್ರತಿ ನಗರಗಳಲ್ಲೂ ವಾಯುಮಾಲಿನ್ಯ ಗುಣಮಟ್ಟ ಪರೀಕ್ಷಿಸುವ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಕೈಗಾರಿಕೆಗಳು ಸಾರ್ವಜನಿಕ ಸ್ನೇಹಿ ಕೆಲಸ ಮಾಡಿದರೆ ಮಂಡಳಿಯೂ ಅವರಿಗೆ ಸ್ನೇಹಪೂರ್ವಕವಾಗಿರುತ್ತದೆ ಎಂದು ತಿಳಿಸಿದರು.
ಪರಿಸರ ನಡಿಗೆ: ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ರಂದು ಬೆಳಗ್ಗೆ 8 ಗಂಟೆಗೆ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮುಂಭಾಗದಲ್ಲಿ ‘ಪರಿಸರ ನಡಿಗೆ’ ಏರ್ಪಡಿಸಲಾಗಿದೆ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮತ್ತು ಎನ್‌ಸಿಸಿ ಕೆಡೆಟ್ಸ್ ಸೇರಿದಂತೆ ಸುಮಾರು 3,000 ಜನರು ಭಾಗವಹಿಸುತ್ತಾರೆ. ಅರಮನೆ ಮೈದಾನದಲ್ಲಿ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ವಿದ್ಯುತ್ ಚಾಲಿತ ವಾಹನಗಳ ಬಳಕೆ, ರೈತರಿಗೆ ವಿದ್ಯುತ್ ಚಾಲಿತ ಟ್ರ್ಯಾಕ್ಟರ್‌ಗಳ ಮಾಹಿತಿ, ಹೊಸ ಆವಿಷ್ಕಾರಗಳ ಕುರಿತ ಪ್ರದರ್ಶನವಿರುತ್ತದೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಎಸ್. ಲಿಂಗರಾಜು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಯೋಜನೆಗಳು ಅನುಷ್ಠಾನಗೊಳಿಸಲಿದೆ. ಅದರಲ್ಲಿ, ಬಾಟಲಿ ಸಂಗ್ರಹಿಸುವ ಕಿಯೊಸ್ಕ್ ಮೊದಲ ಪ್ರಯತ್ನ.–ಪಿ.ಎಂ. ನರೇಂದ್ರಸ್ವಾಮಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
ಚಲನಚಿತ್ರಕ್ಕೆ ₹50 ಲಕ್ಷ ಬಹುಮಾನ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷ ಆಚರಣೆ ಅಂಗವಾಗಿ ಉತ್ತಮ ಪರಿಸರಸ್ನೇಹಿ ಚಲನಚಿತ್ರಕ್ಕೆ ₹50 ಲಕ್ಷ ಬಹುಮಾನ ನೀಡಲಾಗುವುದು. ಇದಕ್ಕಾಗಿ ಆಯ್ಕೆ ಸಮಿತಿ ರಚಿಸಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ತಿಳಿಸಿದರು.
ಸೆಪ್ಟೆಂಬರ್ 1ಕ್ಕೆ ಮಂಡಳಿ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಳ್ಳಲಿದೆ. ಆಗಸ್ಟ್‌ನಲ್ಲಿ ಸಂಭ್ರಮಾಚರಣೆಯ ಉದ್ದೇಶವಿದ್ದು, ವರ್ಷಪೂರ್ತಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಪ್ರಾಥಮಿಕ ಶಿಕ್ಷಣದಲ್ಲಿ ಪರಿಸರದ ಪಠ್ಯ ಸೇರಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.