
ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಕುಸಿತ ಹಾಗೂ ಶೀತ ಗಾಳಿಯಿಂದಾಗಿ ಚಳಿ ಹೆಚ್ಚಳವಾಗುತ್ತಿದೆ. ಕಳೆದ ಒಂದು ವಾರದಿಂದ ತಾಪಮಾನದಲ್ಲಿ ಇಳಿಕೆಯಾಗುತ್ತಿದ್ದು, ಮುಂಜಾನೆ ಮತ್ತು ರಾತ್ರಿ ವೇಳೆ ಚಳಿ ತೀವ್ರಗೊಂಡಿದೆ.
ಕಳೆದ 24 ಗಂಟೆಯ ಅವಧಿಯಲ್ಲಿ ಬೀದರ್‌ನಲ್ಲಿ ಗರಿಷ್ಠ ತಾಪಮಾನ 27.6 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಸಾಮಾನ್ಯಕ್ಕಿಂತ 5.7 ಡಿಗ್ರಿ ಸೆಲ್ಸಿಯಸ್ ಕುಸಿತ ಕಂಡಿದೆ. ಈ ಭಾಗದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ.
ರಾಯಚೂರಿನಲ್ಲಿ ಗರಿಷ್ಠ ತಾಪಮಾನ 30.2 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, 3.1 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಅದೇ ರೀತಿ ವಿಜಯಪುರ, ಕೊಪ್ಪಳ, ದಾವಣಗೆರೆ, ಗದಗ, ಶಿವಮೊಗ್ಗದಲ್ಲಿ ತಾಪಮಾನದಲ್ಲಿ ಇಳಿಕೆಯಾದ ಪರಿಣಾಮ ಚಳಿಯ ವಾತಾವರಣ ಇದೆ.
ರಾಜ್ಯದ ಹಲವೆಡೆ ಭಾರಿ ಥಂಡಿಯಿಂದಾಗಿ ಎಲ್ಲಾ ವಯೋಮಾನದವರು ಸ್ವೆಟರ್, ಮಫ್ಲರ್, ಜಾಕೆಟ್ ಧರಿಸಿಕೊಂಡು ಓಡಾಡುವುದು ಸಾಮಾನ್ಯವಾಗಿದೆ.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳುವ ಸಾಧ್ಯತೆ ಹೆಚ್ಚು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.