ADVERTISEMENT

ವಾಣಿಜ್ಯ ಕೋರ್ಟ್‌ ಕಾಲಮಿತಿ ಪಾಲನೆ ಕಡ್ಡಾಯ: ಹೈಕೋರ್ಟ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 14:30 IST
Last Updated 17 ಸೆಪ್ಟೆಂಬರ್ 2025, 14:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ವಾಣಿಜ್ಯ ನ್ಯಾಯಾಲಯಗಳು ನೀಡುವ ಆದೇಶಗಳಲ್ಲಿ ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟಂತೆ ನಿಗದಿಪಡಿಸಲಾದ ಕಾಲಮಿತಿಯನ್ನು ವಾಣಿಜ್ಯ ನ್ಯಾಯಾಲಯಗಳ ಕಾಯ್ದೆ ಅನುಸಾರ ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗುತ್ತದೆ’ ಎಂದು ಹೈಕೋರ್ಟ್‌, ಸಿವಿಲ್‌ ವ್ಯಾಜ್ಯವೊಂದರಲ್ಲಿ ಸ್ಪಷ್ಟಪಡಿಸಿದೆ.

ನವದೆಹಲಿಯ, ಇಫ್ಕೊ (ಐಎಫ್‌ಎಫ್‌ಸಿಒ) ‘ಟೋಕಿಯೊ ಜನರಲ್ ಇನ್ಶೂರೆನ್ಸ್‌ ಲಿಮಿಟೆಡ್ ಕಂಪನಿ’ಯ ಸ್ಥಳೀಯ ಪ್ರತಿನಿಧಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ‘ಇಂತಹ ಪ್ರಕರಣಗಳಲ್ಲಿ ಹೈಕೋರ್ಟ್‌ ಔದಾರ್ಯವನ್ನು ಪ್ರದರ್ಶಿಸುತ್ತಾ ಹೋದರೆ ಶಾಸನೀಯ ಅಸ್ತಿತ್ವದ ಮೂಲ ಉದ್ದೇಶವೇ ಸೋಲುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ದಾವೆದಾರನು ದಾವೆಯೊಂದಿಗೆ ದಾಖಲೆಗಳನ್ನು ಬಹಿರಂಗಗೊಳಿಸದೇ ಇರುವುದಕ್ಕೆ ಸಮಂಜಸ ಕಾರಣವನ್ನು ತೋರಿಸಿ, ಅದನ್ನು ಸಮರ್ಥಿಸಿಕೊಳ್ಳಬೇಕು. ಆದಾಗ್ಯೂ, ದಾವೆ ಸಲ್ಲಿಸುವ ಸಮಯದಲ್ಲಿ ಆ ದಾಖಲೆಗಳು ದಾವೆದಾರರ ಅಧಿಕಾರ, ಸ್ವಾಧೀನ, ನಿಯಂತ್ರಣ ಅಥವಾ ವಶದಲ್ಲಿ ಇರಲಿಲ್ಲ ಮತ್ತು ನಂತರದಲ್ಲಿ ಪತ್ತೆಯಾಗಿವೆ ಎಂದು ದಾವೆದಾರನು ಸ್ಪಷ್ಟಪಡಿಸಿದರೆ, ಅಂತಹ ಸಂದರ್ಭಗಳಲ್ಲಿ ಸಮಂಜಸ ಕಾರಣವನ್ನು ಸಾದರಪಡಿಸುವ ಅಗತ್ಯ ಇರುವುದಿಲ್ಲ’ ಎಂಬ ಸುಪ್ರೀಂ ಕೋರ್ಟ್‌ ಮತ್ತು ‘ಸಾಮಾನ್ಯ ದಾವೆಗಳಲ್ಲಿ ತೋರಬಹುದಾದ ಸಡಿಲಿಕೆಯನ್ನು ವಾಣಿಜ್ಯ ಪ್ರಕರಣಗಳಲ್ಲೂ ಅನ್ವಯಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ’ ಎಂಬ ವಿವಿಧ ಹೈಕೋರ್ಟ್‌ಗಳ ತೀರ್ಪುಗಳನ್ನು ನ್ಯಾಯಪೀಠ ಉಲ್ಲೇಖಿಸಿದೆ.

ADVERTISEMENT

ಏನಿದು ಪ್ರಕರಣ?

‘ಅಸಲು ದಾವೆಗೆ ಸಂಬಂಧಿಸಿದಂತೆ ಸಿವಿಲ್‌ ಪ್ರಕ್ರಿಯಾ ಸಂಹಿತೆ–1908ರ ನಿಯಮ 11 ನಿರ್ಣಯ 1ರ ಅಡಿಯಲ್ಲಿ ನಾವು ಕೆಲವು ದಾಖಲಾತಿಗಳನ್ನು ನೀಡಬೇಕಿದೆ. ಇದಕ್ಕೆ ಅನುಮತಿ ನೀಡಬೇಕು. ಈ ದಾಖಲೆಗಳು ದಾವೆದಾರರು ಮಂಡಿಸಿರುವ ಸಾಕ್ಷ್ಯಕ್ಕೆ ಪ್ರತಿಯಾಗಿ ಬಳಸುವಂತಹವುಗಳಾಗಿವೆ. ಆದ್ದರಿಂದ ನಮ್ಮ ಈ ಮನವಿಯನ್ನು ಮಾನ್ಯ ಮಾಡಬೇಕು’ ಎಂದು ಅರ್ಜಿದಾರರು 11ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ವಾಣಿಜ್ಯ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರತಿವಾದಿಗಳು ‘ಕಾನೂನು ಪ್ರಕಾರ ತಮ್ಮ ಲಿಖಿತ ಅಥವಾ ಅಂಗೀಕಾರ ಮತ್ತು ನಿರಾಕರಣೆಯ ಹೇಳಿಕೆಯನ್ನು (Statement of Admissions and Denial) ಸಲ್ಲಿಸುವ ಸಮಯದಲ್ಲಿಯೇ ಎಲ್ಲಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಬೇಕಾಗಿತ್ತು. ದಾಖಲೆಗಳನ್ನು ತುಂಡು-ತುಂಡಾಗಿ ನೀಡುವುದರಿಂದ ಕಾನೂನಿನ ನಿಯಮದ ಉದ್ದೇಶವನ್ನು ಕುಗ್ಗಿಸುವಂತಾಗುತ್ತದೆ’ ಎಂದು ಮಧ್ಯಂತರ ಅರ್ಜಿಯನ್ನು ವಿರೋಧಿಸಿದ್ದರು. ವಾಣಿಜ್ಯ ನ್ಯಾಯಾಲಯ ಈ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಾಣಿಜ್ಯ ದಾವೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದೇ ವಾಣಿಜ್ಯ ಕಾಯ್ದೆಯ ಉದ್ದೇಶ. ದಾಖಲಾತಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಲ್ಲಿಸಲು ಅವಕಾಶ ನೀಡಿದರೆ ಕಾಯ್ದೆಯ ಉದ್ದೇಶವನ್ನೇ ಹಾಳು ಮಾಡಿದಂತಾಗುತ್ತದೆ.
ನ್ಯಾ.ಎಂ.ನಾಗಪ್ರಸನ್ನ, ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.