ಹುಬ್ಬಳ್ಳಿ: 'ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಮಂಗಳೂರಿನಲ್ಲಿ ಅತಿ ಹೆಚ್ಚು ಕೋಮು ಪ್ರಚೋದಕ ಕೊಲೆ ಪ್ರಕರಣಗಳು ನಡೆದಿವೆ. ಸರ್ಕಾರ ತಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಒಂದು ವರ್ಗ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೃತ್ಯ ಎಸಗುತ್ತಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಸೋಮವಾರ ಸುದ್ದಿಗಾರರೊಂದಿ ಮಾತನಾಡಿದ ಅವರು, 'ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಕಾರ್ಯಕರ್ತರ ಕೊಲೆ ಹಾಗೂ ಗಲಭೆಗಳು ನಡೆಯುತ್ತವೆ. ಗಲಭೆ ನಡೆಸಿದವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಹ ರದ್ದು ಪಡಿಸಲಾಗುತ್ತದೆ. ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ಪ್ರಕರಣವೇ ಇದಕ್ಕೆ ನಿದರ್ಶನ. ತಾವು ಏನೇ ಮಾಡಿದರೂ, ಕಾಂಗ್ರೆಸ್ ತಮ್ಮ ರಕ್ಷಣೆಗೆ ಇದೆ ಎಂದು ಭಾವಿಸಿರುವುದರಿಂದ, ಇಂಥ ಪ್ರಕರಣಗಳು ಆಗಾಗ ಮರುಕಳಿಸುತ್ತ ಇರುತ್ತವೆ' ಎಂದು ಅಭಿಪ್ರಾಯಪಟ್ಟರು.
'ಕಾಶ್ಮೀರದ ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಕೈಗೊಳ್ಳಬೇಕಾದ ತುರ್ತು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿದ್ದು, ಅಲ್ಲಿ ತೀವ್ರ ಸಮಸ್ಯೆ ಸೃಷ್ಟಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಬ್ಬಂಟಿ ಮಾಡುವ ಯತ್ನವೂ ನಡೆಯುತ್ತಿದೆ. ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಸೂಕ್ತ ಸಮಯದಲ್ಲಿ ಉತ್ತರ ದೊರೆಯಲಿದೆ. ಕಾಲಮಿತಿ ಹಾಕಿಕೊಂಡು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ' ಎಂದು ಹೇಳಿದರು.
'ಮಾಧ್ಯಮದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಪಿಎಸ್ ಗೊಂದಲದ ಬಗ್ಗೆ ಪ್ರಶ್ನಿಸಿದರೆ, ಅವರು ಮಹದಾಯಿ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಕೆಪಿಎಸ್‌ಸಿ ಫಿಲ್ಮನರಿ ಪರೀಕ್ಷೆಯಲ್ಲಿ ಎಂಬತ್ತು ಪ್ರಶ್ನೆ ತಪ್ಪು ಇತ್ತು. ಪರೀಕ್ಷಾ ಮುನ್ನಾದಿನ ತಡರಾತ್ರಿವರೆಗೂ ಪ್ರವೇಶ ಪತ್ರ ನೀಡಿದರು. ಇದನ್ನು ಪ್ರಶ್ನಿಸಿದರೆ ಮೆಣಸಿನಕಾಯಿ ತಿಂದ ಹಾಗೆ ಆಡುತ್ತಾರೆ. ಶುದ್ಧ ಅಯೋಗ್ಯ ಭಂಡತನದ ಪರಮಾವಧಿ ಇದಾಗಿದೆ' ಎಂದು ಹರಿಹಾಯ್ದರು.
'ಮಹದಾಯಿ ಸಮಸ್ಯೆ ಈಗಿನದ್ದಲ್ಲ, 1970 ರಿಂದಲೂ ಇತ್ತು. ಇತ್ತೀಚೆಗೆ ಅದು ಹೆಚ್ಚು ಚರ್ಚಿತವಾಗುತ್ತಿದೆ. ಕಾಂಗ್ರೆಸ್ ಸಾಯಕಿ ಸೋನಿಯಾ ಗಾಂಧಿ ಅವರು, ಕರ್ನಾಟಕಕ್ಕೆ ಒಂದು ಹನಿ ನೀರು ಬಿಡುವುದಿಲ್ಲ ಎಂದಿದ್ದರು. ಎರಡೂ ರಾಜ್ಯಗಳು ಚರ್ಚಿಸಿ ಪರಿಹರಿಸಿಕೊಳ್ಳುವ ಸಮಸ್ಯೆಯನ್ನು ಕೋರ್ಟ್‌ಗೆ ಕೊಂಡೊಯ್ದಿದ್ದು ಇವರೇ. ಸುಪ್ರೀಂ ಕೋರ್ಟ್‌ನಲ್ಲಿ ವಿಷಯ ಇರುವ ಕಾರಣ ಸದ್ಯ ತೀರ್ಮಾನ ಕೈಗೊಳ್ಳದಂತೆ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ವಿನಂತಿಸಿದ್ದು ಯಾರು' ಎಂದು ಸಚಿವ ಜೋಶಿ ಪ್ರಶ್ನಿಸಿದರು.
ತಪಾಸಣೆ ನಡೆಸುವುದು ತಪ್ಪಲ್ಲ
'ಜನಿವಾರ ಬ್ರಾಹ್ಮಣ ಸಮುದಾಯವಷ್ಟೇ ಅಲ್ಲ, ವಿವಿಧ ಸಮಾಜದವರು ಧರಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿಯಮಾವಳಿ ಪ್ರಕಾರ ತಪಾಸಣೆ ನಡೆಸುವುದು ತಪ್ಪಲ್ಲ. ಕಲಬುರ್ಗಿಯಲ್ಲಿ ನಡೆದ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಸರ್ಕಾರ ಕ್ರಮ ಕೈಗೊಳ್ಳಲಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.