ಬೆಂಗಳೂರು: ಅನುಕಂಪದ ಆಧಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿರುವ ಹೈಕೋರ್ಟ್, ಇವುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಜವಾನ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಅನುಕಂಪದ ಆಧಾರದಡಿ ಕೆಲಸ ನೀಡಬೇಕಾದ ಪ್ರಕರಣವೊಂದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಂ.ನವಾಜ್ ನೇತೃತ್ವದ ವಿಭಾಗೀಯ ನ್ಯಾಯಪೀಠ (ಕಲಬುರಗಿ), ‘ಈ ಪ್ರಕರಣದಲ್ಲಿ ಅರ್ಹ ಅವಲಂಬಿತರಿಗೆ ನಿಯಮಗಳನ್ನು ಪಾಲಿಸಲು ನ್ಯಾಯಯುತ ಅವಕಾಶ ನಿರಾಕರಿಸಲಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) 2017ರಲ್ಲಿ ನೀಡಿರುವ ಆದೇಶದ ಪ್ರಕಾರ ಎಂಟು ವಾರಗಳಲ್ಲಿ ಮೃತರ ಪುತ್ರ ಮಹಬೂಬ್ ಅವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಿ’ ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.
ಮಾರ್ಗಸೂಚಿಗಳು
* ಅಧಿಕಾರಿಗಳು ಎಲ್ಲಾ ರೀತಿಯ ಅನುಕಂಪ ಆಧರಿತ ನೇಮಕಾತಿ ಅರ್ಜಿಗಳನ್ನು 30 ದಿನಗಳ ಒಳಗೆ ಲಿಖಿತವಾಗಿ ಸ್ವೀಕರಿಸಬೇಕು.
* ಅರ್ಜಿಗಳ ಸ್ಥಿತಿ, ಯಾವುದೇ ದಾಖಲೆಗಳ ಕೊರತೆ, ಅವಲಂಬಿತರ ಅರ್ಜಿ ಸಲ್ಲಿಸುವ ಹಕ್ಕುಗಳು ಮತ್ತು ಅನ್ವಯಿಸುವ ಮಿತಿಯ ಅವಧಿಯನ್ನು ನಿರ್ದಿಷ್ಟಪಡಿಸಬೇಕು.
* ಮೃತ ವ್ಯಕ್ತಿಯ ವಾರಸುದಾರರು ಮತ್ತು ಅನಕ್ಷರಸ್ಥ ಅರ್ಜಿದಾರರು ಸರಿಯಾದ ಅರ್ಜಿ ಸಲ್ಲಿಸುವಲ್ಲಿ ಇಲಾಖೆಗಳು ಅವರಿಗೆ ಸಹಾಯ ಮಾಡಬೇಕು ಮತ್ತು ಈ ಬಗ್ಗೆ ಅವಲಂಬಿತರಿಗೆ ಮಾರ್ಗದರ್ಶನ ನೀಡಬೇಕು.
* ಅರ್ಜಿಗಳ ಕುರಿತ ನಿರ್ಧಾರಗಳನ್ನು ಅರ್ಜಿ ಸ್ವೀಕರಿಸಿದ 90 ದಿನಗಳ ಒಳಗೆ ತೆಗೆದುಕೊಳ್ಳಬೇಕು.
* ತಿರಸ್ಕರಿಸಿದ ಅರ್ಜಿಗಳಿಗೆ ಸಮಂಜಸವಾದ ಕಾರಣಸಹಿತ ಆದೇಶಗಳನ್ನು ಒದಗಿಸಬೇಕು.
* ಈ ಸಂಬಂಧ ಸರ್ಕಾರ ಏಕರೂಪದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಜಾರಿಗೆ ತರಬೇಕು.
* ಅನುಕಂಪದ ಆಧಾರದಡಿ ನೇಮಕಾತಿಗಳನ್ನು ಮಾಡುವ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.