ADVERTISEMENT

24 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ಯಾಯದ ದೂರು: ಸಿಎಂಗೆ ಎಚ್‌.ಕೆ. ಪಾಟೀಲ ಪತ್ರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 15:39 IST
Last Updated 27 ಜನವರಿ 2024, 15:39 IST
<div class="paragraphs"><p>ಎಚ್‌.ಕೆ. ಪಾಟೀಲ</p></div>

ಎಚ್‌.ಕೆ. ಪಾಟೀಲ

   

ಬೆಂಗಳೂರು: ‘ವಿವಿಧ ಇಲಾಖೆಗಳಿಗೆ ಹುದ್ದೆಗಳ ನೇಮಕಾತಿಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2023ರ ಫೆ. 1ರಂದು ಹೊರಡಿಸಿರುವ ಸುತ್ತೋಲೆಯಿಂದ ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿದ 24 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಮನವಿ ಮಾಡಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ‘ಸರ್ಕಾರ ಹೊರಡಿಸಿರುವ ಸುತ್ತೋಲೆಯು ರಾಜ್ಯಪಾಲರು ಹೊರಡಿಸಿರುವ ಗೆಜೆಟ್‌ ಕಾಯ್ದೆ ಮತ್ತು ನಿಯಮಗಳಿಗೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಾರಿ ಆಗುತ್ತಿರುವುದು ಗಮನಕ್ಕೆ ಬಂದಿದೆ’ ಎಂದಿದ್ದಾರೆ.

ADVERTISEMENT

‘ಹುದ್ದೆಗಳಿಗೆ ಆಯ್ಕೆ ಮಾಡುವಾಗ ಉಳಿಕೆ ವೃಂದದ ಹುದ್ದೆಗಳನ್ನು ಮೊದಲು ಭರ್ತಿ ಮಾಡಿ, ಕಲ್ಯಾಣ ಕರ್ನಾಟಕ (ಹೈ–ಕ) ಪ್ರದೇಶಕ್ಕೆ ಮೀಸಲಿಟ್ಟ ಹುದ್ದೆಗಳನ್ನು ನಂತರ ತುಂಬಬೇಕು’ ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) 2023ರ ನ. 8ರಂದು ರದ್ದುಪಡಿಸಿದೆ. ಅಲ್ಲದೆ, ‘ಮೆರಿಟ್ ಇರುವ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳನ್ನು ಮೊದಲು ಕಲ್ಯಾಣ ಕರ್ನಾಟಕ ವೃಂದದಲ್ಲಿಯೇ ಭರ್ತಿ ಮಾಡಬೇಕು. ನಂತರ ಕಲ್ಯಾಣ ಕರ್ನಾಟಕ ವೃಂದದಲ್ಲಿ ಆಯ್ಕೆಯಾಗದ ಕಡಿಮೆ ಮೆರಿಟ್ ಇರುವ ಅಭ್ಯರ್ಥಿಗಳನ್ನು ಮಿಕ್ಕುಳಿದ ವೃಂದದಲ್ಲಿ ಅರ್ಹತೆಯ ಕ್ರಮದಲ್ಲಿ ಆಯ್ಕೆ ಮಾಡಬೇಕು’ ಎಂದೂ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೆಎಟಿಯ ಈ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸದೆ ಇಲಾಖಾ ಹಂತದಲ್ಲಿಯೇ ಕೆಎಟಿ ಆದೇಶ ಮತ್ತು ಅಭ್ಯರ್ಥಿಗಳಿಂದ ಬಂದಿರುವ ದೂರುಗಳನ್ನು ಪರಿಶೀಲಿಸಿ, 24 ಜಿಲ್ಲೆಗಳ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಅವರು ಪಾಟೀಲ ಪ್ರತಿಪಾದಿಸಿದ್ದಾರೆ.

‘ರಾಜ್ಯಪಾಲರ ಆದೇಶ ಮತ್ತು ಕೆಎಟಿ ನೀಡಿರುವ ತೀರ್ಪುಗಳ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚಿಸಬೇಕು. ಈ ಸಮಿತಿಯ ವರದಿ ಆಧರಿಸಿ, ಮೀಸಲಾತಿ ನಿಯಮ ಅನುಷ್ಠಾನಗೊಳಿಸುವಂತೆ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ’ ಎಂದೂ ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.