ಬೆಂಗಳೂರು: ‘ಕೋರ್ಟ್ ಆದೇಶದ ಬಗ್ಗೆ ನಾನು ಮಾತನಾಡುವುದಿಲ್ಲ. ಕೋರ್ಟ್ ನೀಡಿರುವ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ’ ಎಂದು ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹೇಳಿದರು.
ಬಿಜೆಪಿ ಮುಖಂಡ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣದ ಸಾಕ್ಷಿಗಳನ್ನು ಸಂಪರ್ಕಿಸಿ ಪ್ರಭಾವ ಬೀರಲು ಯತ್ನಿಸಿ, ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ವಿನಯ ಕುಲಕರ್ಣಿ ಅವರಿಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಪಡಿಸಿತ್ತು. ಅಲ್ಲದೆ, ಒಂದು ವಾರದ ಒಳಗೆ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ನಿರ್ದೇಶನ ನೀಡಿತ್ತು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶನಿವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ವಿನಯ ಕುಲಕರ್ಣಿ, ‘ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲ ವಿಚಾರ ತಿಳಿಸಿದ್ದೇನೆ. ಇದರ ಹಿಂದೆ ಹಲವರ ಕೈವಾಡ ಇದೆ. ಇದು ಸಮಸ್ಯೆಯೇನೂ ಇಲ್ಲ. ಕೋರ್ಟ್‌ನಲ್ಲಿ ಸಾಕ್ಷಿ ಬೇಕು. ಸಾಕ್ಷಿ ಮೇಲೆ ಕೋರ್ಟ್ ತೀರ್ಮಾನ ಮಾಡುತ್ತದೆ’ ಎಂದರು.
ಮುಂದಿನ ಕಾನೂನು ಹೋರಾಟದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇನ್ನೂ ಕೆಲವು ದಿನಗಳ ಕಾಲಾವಕಾಶವಿದೆ. ಈ ಪ್ರಕರಣದಲ್ಲಿ ನನ್ನ ಕೈವಾಡ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾರಿಗೂ ಒಂದೇ ಒಂದು ಕರೆ ಮಾಡಿಲ್ಲ’ ಎಂದರು.
‘ಈ ಪ್ರಕರಣದ ವಿಚಾರದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ, ಮಾಡಲಿ. ದೇವರಿದ್ದಾನೆ. ನನ್ನನ್ನು ಮತ್ತೆ ಜೈಲಿಗೆ ಕಳುಹಿಸಬೇಕು ಎನ್ನುವುದು ಇದೆ ಹಿಂದಿನ ಉದ್ದೇಶ ಉದ್ದೇಶ’ ಎಂದು ಪರೋಕ್ಷವಾಗಿ ಕೇಂದ್ರ ಸಚಿವರೊಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ನಿಮ್ಮ ಭಾಗದ (ಧಾರವಾಡ) ನಾಯಕರೊಬ್ಬರು ಕೈವಾಡವೇ’ ಎಂಬ ಪ್ರಶ್ನೆಗೆ ‘ತುಂಬಾ ಜನ ಇದ್ದಾರೆ’ ಎಂದಷ್ಟೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.